About the Author

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಜಿ. ರಾಮನಾಥ ಭಟ್ ಅವರು ಮೈಸೂರು ನಿವಾಸಿಯಾಗಿದ್ದಾರೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ (1959) ಪಡೆದಿರುವ ಅವರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ ಜಲ ವಿದ್ಯುತ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದರು. 1962ರಿಂದ ಮೂವತ್ತೈದು ವರ್ಷ ಕರ್ನಾಟಕದ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1997ರಲ್ಲಿ ಸ್ವಯಂ ನಿವೃತ್ತರಾದರು. 1986ರಿಂದ ಕೃಷ್ಣರಾಜಸಾಗರದಲ್ಲಿರುವ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ.

ಶಾಲಾ ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ಅವರು ಅರುವತ್ತರ ದಶಕದಲ್ಲಿ ರವೀಂದ್ರನಾಥ ಠಾಕೂರರ ಸಾಹಿತ್ಯದತ್ತ ಆಕರ್ಷಿತರಾದರು. ಸರ್ಕಾರಿ ಕೆಲಸದಲ್ಲಿದ್ದರೂ ರವೀಂದ್ರನಾಥ ಠಾಕೂರರ ’ಗೀತಾಂಜಲಿ’ಯಲ್ಲದೇ ಬೇರೆ ಕವಿತೆಗಳು ಕನ್ನಡಕ್ಕೆ ಅನುವಾದ ಆಗದೇ ಇರುವುದನ್ನು ಗಮನಿಸಿದರು. 1999ರಲ್ಲಿ ರವೀಂದ್ರನಾಥ ಠಾಕೂರರ Gitanjali ಹಾಗೂ Crescent Moon ಕವನ ಸಂಗ್ರಹಗಳಿಂದ ಆಯ್ದ ಇನ್ನೂರು ಕವನಗಳ ’ಗೀತಾಂಜಲಿ’ ಪ್ರಕಟಿಸಿದರು. ರವೀಂದ್ರರ ಉಳಿದ ಇಂಗ್ಲಿಷ್ ಕವನ ಸಂಗ್ರಹಗಳ ಕನ್ನಡ ಅನುವಾದಗಳು ಫಲಸಂಚಯ, ವನಪಾಲಕ, ಕವಿತಾಸಂಚಯ, ಕಬೀರರ ಕವನಗಳು, ಬಿದಿಗೆಯ ಚಂದ್ರ ಮತ್ತು ಶೇಷಗೀತ - ಹಾಗೂ ರವೀಂದ್ರರು ಮತ್ತು ಗಾಂಧೀಜಿಯವರ ನಡುವಿನ ಸಂವಾದ ಹಾಗೂ ಪತ್ರ ಸಂಚಯ ಗುರುದೇವ ಮತ್ತು ಮಹಾತ್ಮ ಮತ್ತು ರವೀಂದ್ರರ ಜೀವನಚರಿತ್ರೆ ಗುರುದೇವ ಅವರ ಪ್ರಕಟಿತ ಕೃತಿಗಳು.

ಜಿ. ರಾಮನಾಥ್ ಭಟ್