About the Author

ಲೇಖಕಿ ಎಸ್. ನಾಗಶ್ರೀ ಅಜಯ್ ಅವರು 1990 ಜನವರಿ 8ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಳೆದದ್ದು, ಶಿಕ್ಷಣ ಪಡೆದದ್ದು, ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಂಡಿದ್ದು ಮೈಸೂರಿನಲ್ಲಿ.

ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಅವರು ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿದ್ದು, ಅನಂತರ ವಾಣಿಜ್ಯ ವಿಷಯದ ಬಗ್ಗೆ ಆಸಕ್ತಿ ತೆಳೆದು, ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬೆಳ್ಳಿ ಪದಕದೊಂದಿಗೆ ಬಿ.ಕಾಂ ಪದವಿಯನ್ನು ಪೂರೈಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಕಾಂ ಹಾಗೂ ಪ್ರತಿಷ್ಠಿತ ಐ.ಸಿ.ಎಂ.ಎ ಇಂಟರ್ ಪದವೀಧರೆಯಾಗಿದ್ದಾರೆ. 12 ವರ್ಷಗಳ ಕಾಲ ಆಕಾಶವಾಣಿ ಎಫ್ ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2023ರ ಆಗಸ್ಟ್ ತಿಂಗಳಿನಿಂದ ಬೆಂಗಳೂರು ಆಕಾಶವಾಣಿಯ ಉದ್ಘೋಷಕಿಯಾಗಿ ಹಾಗೂ ಕಳೆದ 8 ವರ್ಷಗಳಿಂದ ಡಿ.ಡಿ ಚಂದನದ ನಿರೂಪಕಿಯಾಗಿ ಸಾಂದರ್ಭಿಕ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.. ಕನ್ನಡ ಪ್ರಭದ 'ಸಖಿ' ಪಾಕ್ಷಿಕದ ಉಪ ಸಂಪಾದಕಿಯಾಗಿ, ಅಂಕಣಕಾರ್ತಿಯಾಗಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದಾರೆ.

ಟಾಟಾ ಮಾಲಿಕತ್ವದ ರಾಲೀಸ್ ಇಂಡಿಯಾ ಲಿಮಿಟೆಡ್ ನ ಲೆಕ್ಕಪತ್ರ ವಿಭಾಗದಲ್ಲಿಯೂ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಮಾಧ್ಯಮ ಸಂಸ್ಥೆಯೊಂದಕ್ಕಾಗಿ ಸೂಕ್ತ ಸಂಶೋಧನೆ ನಡೆಸಿ, ಪ್ರತಿಷ್ಠಿತರ ಸಂದರ್ಶನಗಳಿಗೆ ಪರಿಚಯ, ಪ್ರಶ್ನೋತ್ತರ ಸಿದ್ಧಪಡಿಸುವ 'ಕಂಟೆಂಟ್ ಕ್ರಿಯೇಟರ್' ಆಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದೆ.

ಇತ್ತೀಚೆಗೆ ಆಡಿಯೋ ಪುಸ್ತಕಗಳಿಗೆ ಧ್ವನಿ ನೀಡುವ ಕಂಠದಾನ ಕಲಾವಿದೆಯಾಗಿ, ತ್ರಿವೇಣಿಯವರ ಐದು ಕಾದಂಬರಿಗಳಿಗೆ (ತಾವರೆಯ ಕೊಳ. ವಸಂತಗಾನ. ಹೃದಯಗೀತ. ಅಪಜಯ ಹಾಗು ಅಪಸ್ವರ) ಕೆಲಸ ಮಾಡಿದ್ದಾರೆ. ಈ ಕಾದಂಬರಿಗಳ ಎಲ್ಲಾ ಸ್ತ್ರೀಪಾತ್ರಗಳಿಗೂ ಅಗತ್ಯ ಮಾರ್ಪಾಡಿನೊಂದಿಗೆ ಧ್ವನಿ ನೀಡಿರುವುದು ವಿಶೇಷ. ವಿಜಯ ಕರ್ನಾಟಕ ಪತ್ರಿಕೆ ಏರ್ಪಡಿಸಿದ್ದ 2012ರ ಸಾಲಿನ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆ ಹಾಗೂ 2013ರ ಸಂಕ್ರಾಂತಿ ಲೇಖನ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

ಇವರ ಕವಿತೆ, ಲೇಖನ ಹಾಗೂ ಕಥೆಗಳು ವಿಜಯ ಕರ್ನಾಟಕ, ಕನ್ನಡಪ್ರಭ, ತರಂಗ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಂತರ್ಜಾಲ ಪತ್ರಿಕೆಗಳಾದ ಸುರಹೊನ್ನೆ, ಅವಧಿ, ಕೆಂಡಸಂಪಿಗೆ, ಸಂಗಾತಿ, ನಸುಕು ಮುಂತಾದವು ಇವರ ಕಥೆ, ಕವಿತೆ, ಅಂಕಣಗಳನ್ನು ಪ್ರಕಟಿಸಿವೆ. 2022ರ ಆಗಸ್ಟ್ ತಿಂಗಳಿನಿಂದ ಕೆಂಡಸಂಪಿಗೆಯಲ್ಲಿ 'ಲೋಕ ಏಕಾಂತ' ಎಂಬ ಅಂಕಣ ಪ್ರಕಟಗೊಳ್ಳುತ್ತಿದೆ.

ಕೃತಿಗಳು:
ನಾಲ್ಕು ಋತುಗಳ ಹುಡುಗಿ (ಕವನ ಸಂಕಲನ)

ಎಸ್. ನಾಗಶ್ರೀ ಅಜಯ್

(08 Jan 1990)