About the Author

ಸೇರಾಜೆ ಸೀತಾರಾಮ ಭಟ್ಟರು ಯಕ್ಷಗಾನ ಕವಿ, ಯಕ್ಷಗಾನ ಕಲಾವಿದ, ಸಂಘಟಕ ಮತ್ತು ಪುರಾಣ ಪ್ರವಚನ ವ್ಯಾಖ್ಯಾನಕಾರರಾಗಿ ಪ್ರಸಿದ್ಧರು. ಖ್ಯಾತ ಯಕ್ಷಗಾನ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಸೋದರಳಿಯ. ಉಡುಪಿಯಲ್ಲಿ ಬಿ.ಎಸ್ಸಿ ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸೇರಾಜೆಯವರು ಬೆಂಗಳೂರಿನಲ್ಲಿ ಕರಾವಳಿ ಯಕ್ಷಗಾನ ಸಂಘವನ್ನು ಸ್ಥಾಪಿಸಿದ್ದಲ್ಲದೆ ಮೊದಲ ಬಾರಿಗೆ ಅಲ್ಲಿ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 55 ವರ್ಷಗಳ ಅನುಭವವನ್ನು ಹೊಂದಿರುವ ಸೇರಾಜೆಯವರು ಅರ್ಥಧಾರಿಯೂ, ಹವ್ಯಾಸಿ ವೇಷಧಾರಿಯಾಗಿಯೂ ಜನಮನ್ನಣೆ ಗಳಿಸಿದ್ದಾರೆ. ಯಕ್ಷಗಾನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಅವಲೋಕನಕಾರರಾಗಿ ನಿರತರು. ಸೇರಾಜೆಯವರು ರಚಿಸಿದ ಐದು ಯಕ್ಷಗಾನ ಪ್ರಸಂಗಗಳನ್ನು ಉಡುಪಿಯ ಯಕ್ಷಗಾನ ಕೇಂದ್ರದವರು ಒಂದೇ ಸಂಪುಟದಲ್ಲಿ ಯಕ್ಷಗಾನ ಪ್ರಸಂಗ ಪಂಚಕ ಎಂಬ ಶಿರೋನಾಮೆಯಲ್ಲಿ ಪ್ರಕಟಿಸಿದ್ದಾರೆ. ಇದಲ್ಲದೆ ಸೇರಾಜೆಯವರು ಭಗವದ್ಗೀತೆಯನ್ನು ಕನ್ನಡ ಭಾಮಿನಿಷಟ್ಪದಿ ರೂಪದಲ್ಲಿ ಬರೆದು ಪ್ರಕಟಿಸಿದ್ದಾರೆ.

ಧೀಮಂತ ಪತ್ರಕರ್ತ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಅವರ ನಿಕಟ ಬಾಂಧವ್ಯ ಹೊಂದಿದ್ದ ಸೇರಾಜೆಯವರು ಅವರ ‘ಸರ್ಪಸಂಕಲೆ’ ತುಳುಚಿತ್ರದಲ್ಲಿ ಸಹನಿರ್ದೇಶಕರಾಗಿ ದುಡಿದಿದ್ದರು. ಕಾಶೀನಾಥ್ ಅವರ ‘ಕಲಿಯುಗ ಕೃಷ್ಣ’ ಎಂಬ ಚಲನಚಿತ್ರದಲ್ಲಿ ಒಂದು ಪುಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಅರಗಿಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ವಿಷವರ್ತುಲ’ ಎಂಬ ಫೋಟೋ ಧಾರಾವಾಹಿಯಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸಿದ ಸೇರಾಜೆಯವರು ವಿಟ್ಲ ಜೋಷಿ ಪ್ರಶಸ್ತಿ ಕಲ್ಕೂರ ಪ್ರಶಸ್ತಿ ಮುಂತಾದ ಪ್ರಶಸ್ತಿ ಹಾಗೂ ಹಲವಾರು ಸನ್ಮಾನಗಳಿಂದ ಪುರಸ್ಕೃತರಾಗಿ ಗೌರವಿಸಲ್ಪಟ್ಟಿದ್ದಾರೆ.

ಸೇರಾಜೆ ಸೀತಾರಾಮ ಭಟ್ಟ