About the Author

ಮೃದುಸ್ವಭಾವದ ಸರಳದ ಶೈಲಜಾ. ಜಿ. ಹುಡಗೆ ಯವರು ಅಪರೂಪದ ಉದಯೋನ್ಮುಖ ಸಾಹಿತಿಗಳು. ಬಸವ ತತ್ವವನ್ನು ಬದುಕಿನ ಭಾಗವಾಗಿಸಿಕೊಂಡಿರುವ ಇವರು ಮೂಲತಃ ಔರಾದ ತಾಲ್ಲೂಕಿನ ಖಾನಾಪುರದ ಪ್ರತಿಷ್ಠಿತ ಪಾಟೀಲ ಪರಿವಾರದ ಶಾಂತಾಬಾಯಿ ಅಪ್ಪಾರಾವ ಮಗಳಾಗಿ ೨೯ ಡಿಸೆಂಬರ್ ೧೯೭೮ ರಂದು ಜನಿಸಿದ್ದಾರೆ. ಮುಂದೆ ಬೀದರ ಜಿಲ್ಲೆಯ ಕೊಳಾರ ಗ್ರಾಮದ ಸುಸಂಸ್ಕೃತ ಹುಡಗೆ ಪರಿವಾರದ ಗುಂಡಪ್ಪ ಅವರ ಕೈ ಹಿಡಿದು ಪತಿಗೆ ತಕ್ಕ ಸತಿಯಾಗಿ ತುಂಬು ಸಂಸಾರ ನಡೆಸುತ್ತಿದ್ದಾರೆ. ಪತಿಯಾದ ಗುಂಡಪ್ಪ ಹುಡಗೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾಗಿದ್ದು ಇವರ ಎಲ್ಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನ ಹಿಂದಿನ ಬೇಳಕಾಗಿ ಸಹಕರಿಸುತ್ತಲೇ ಪ್ರೋತ್ಸಾಹಿಸುತ್ತಿದ್ದಾರೆ. ಕುಟುಂಬ ಪ್ರೀತಿ, ಮಧುರ ವಾತ್ಸಲ್ಯಗಳ ಪರಿಸರದಲ್ಲಿ ಬೆಳೆದಿರುವ ಇವರು ಬಾಲ್ಯದಿಂದಲೆ ಪ್ರತಿಭಾನ್ವಿತ ಸೂಕ್ಷö್ಮಗ್ರಾಹಿಗಳು. ಎಲ್ಲವನ್ನು ಪ್ರೀತಿ, ವಿಶ್ವಾಸ ಮತ್ತು ಶ್ರದ್ಧೆಯಿಂದ ಅವಲೋಕಿಸುತ್ತ ಬೆಳೆದು ಎಂ.ಎ., ಎಂ. ಇಡಿ ಪದವಿ ಪಡೆದವರು. ಸದ್ಯ ಮಿಲೆನಿಯಂ ಪಬ್ಲಿಕ್ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಟಗುಪ್ಪಾ,ಜ್ಞಾನಮೃತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಗ್ರಾಮೀಣ ಭಾಗದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಅಭಿಮಾನ ಹಾಗೂ ಹೆಮ್ಮೆಯ ಸಂಗತಿ. ವೃತ್ತಿಯಿಂದ ಶಿಕ್ಷರಾದರೂ ಪ್ರವೃತ್ತಿಯಿಂದ ಸಾಹಿತಿಗಳಾದ ಇವರು “ಭಾವ ಸ್ಪಂದನ”, “ಭಾವ ದೀಪ್ತಿ”, “ಶಿಕ್ಷಣ ಕಿರಣ” ಹಾಗೂ ‘‘ಅನುಭಾವತರಂಗ'' ಆಧುನಿಕ ವಚನಗಳುಳ್ಳ ವಚನ ಸಂಕಲನ ಹೀಗೆ ಹಲವಾರು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದವರು. ಅನೇಕ ಕವನ, ಲೇಖನಗಳನ್ನೂ ಬರೆದಿದ್ದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದೀಗ ಕನ್ನಡದ ಹೋರಾಟಗಾರ ಹಣಮಂತಪ್ಪ ಪಾಟೀಲ ಜೀವನ ಸಾಧನೆ ಕೇಂದ್ರಿತ ಜೀವನ ಚರಿತ್ರೆಯನ್ನು ಓದುಗ ಸಹೃದಯರ ಕೈಗಿಡುತ್ತಿದ್ದಾರೆ. ಇದು ಮಹತ್ವಕಾಂಕ್ಷೆಯ ಕೃತಿಯಾಗಿದ್ದು, ಹಣಮಂತಪ್ಪ ಪಾಟೀಲರ ಸಮಗ್ರ ಹೋರಾಟದ ವಿವಿಧ ಆಯಾಮಗಳ ಮಾದರಿ ಜೀವನ ಚರಿತ್ರೆಯನ್ನು ಕಟ್ಟಕೊಟ್ಟಿದ್ದಾರೆ. 

ಶೈಲಜಾ. ಜಿ. ಹುಡಗೆ