About the Author

ವೃತ್ತಿಯಲ್ಲಿ ಇಂಜಿನಿಯರ್  ಆಗಿರುವ ಶಶಿಕಾಂತ ಪಿ ದೇಸಾಯಿ ಅವರು ಪ್ರವೃತ್ತಿಯಲ್ಲಿ ಬರಹಗಾರ. ಕಥೆ, ಕವನ, ವಿಮರ್ಶೆಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಕಲಬುರಗಿ ಬಾನುಲಿ ಕೇಂದ್ರದಿಂದ ಐದು ನಾಟಕಗಳು ಬಿತ್ತರಗೊಂಡಿವೆ. ’ಶಿಲ್ಪಿ’ ಎಂಬ ನಾಟಕಕ್ಕೆ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ, ಸಮಾಜ ಕಲ್ಯಾಣ ವಿಭಾಗದ ಎರಡನೇ ಬಹುಮಾನ ದೊರಕಿದೆ. ಈ ನಾಟಕವು ಚಿಂಚೋಳಿ ತಾಂಡಾಗಳಲ್ಲಿನ ಶಿಶು ಮಾರಾಟದ ಕುರಿತು ಹಾಗೂ ಆ ವ್ಯವಸ್ಥೆಯಿಂದ ತಾಯಿಯೊಬ್ಬಳು ತನ್ನ ಮಗುವನ್ನು ಆ ಪಿಡುಗಿನಿಂದ ರಕ್ಷಿಸಿ, ಅವಳನ್ನು ಓದಿಸಿ ಬೆಳೆಸುವಲ್ಲಿ ಸಫಲಳಾಗುತ್ತಾಳೆ.

ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಆಯೋಜಿಸುವ ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ’ಇನ್ನೂ ಯಾಕ ಬರಲಿಲ್ಲವ್ರು’ ಎಂಬ ಕಥೆಗೆ ಸಮಾಧಾನಕರ ಬಹುಮಾನ ಬಂದಿದೆ. ’ಸಂಕ್ರಮಣ’ ಸಾಹಿತ್ಯ ಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ’ಬದುಕು ಮತ್ತು ಹೋರಾಟ’, ’ಜ್ವಾಕಿ ಇರದಾವು’ ಎಂಬ ಎರಡು ಕಥೆಗಳಿಗೆ ಬಹುಮಾನ, ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ’ಕಪ್ಪು ಮುಗಿಲ ಚಂದ್ರಾಮ’ ಕಥೆಗೆ ದ್ವಿತೀಯ ಬಹುಮಾನ ದೊರೆತಿವೆ.

ಕಲಬುರಗಿಯ ಉದಯೋನ್ಮುಖ ಬರಹಗಾರರ ಬಳಗವು ನೀಡುವ ’ಉದಯೋನ್ಮುಖ ಬರಹಗಾರ’ ಪ್ರಶಸ್ತಿ, ಬೆಂಗಳೂರಿನ ಸ್ನೇಹಸೇತು ಸಂಸ್ಥೆಯ ’ಸಾಹಿತ್ಯ ಸೇತು’ ಪ್ರಶಸ್ತಿಗಳು ದೊರಕಿವೆ. ’ಹನಿಮುತ್ತು’ ಹನಿಗವನಗಳ ಸಂಕಲನ ಹಾಗೂ ಕನ್ನಡ ನಾಡು ಲೇಖಕರ ಬಳಗ ಕಲಬುರಗಿ ಪ್ರಕಾಶನದಿಂದ ’ಕಂಬಳಿಯ ಕೆಂಡ’ ಎಂಬ ಕಥಾ ಸಂಕಲನ ಪ್ರಕಟಗೊಂಡಿವೆ. ’ಕಂಬಳಿಯ ಕೆಂಡ’ ಎಂಬ ಕಥಾ ಸಂಕಲನಕ್ಕೆ ’ಅಮ್ಮ’ ಪ್ರಶಸ್ತಿ ದೊರೆತಿದೆ. ಅನೇಕ ಕವಿಗೋಷ್ಟಿಗಳಲ್ಲಿ ಕವನ ವಾಚನ. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಗುಲಬರ್ಗಾ ಕಥೆಗಾರರ ಪ್ರಾತಿನಿಧಿಕ ಕಥಾಸಂಕಲನದಲ್ಲಿ ’ಸಾವಿಗೊಂದು ಪರಿಹಾರ’ ಎಂಬ ಕಥೆ ಪ್ರಕಟವಾಗಿದೆ. ಪ್ರಸ್ತುತ ಕಲಬುರಗಿಯಲ್ಲಿ ಸರ್ಕಾರಿ ಸೇವೆಯಲ್ಲಿದ್ದಾರೆ.

ಶಶಿಕಾಂತ ಪಿ ದೇಸಾಯಿ

(25 Dec 1966)

Awards