About the Author

ಲೇಖಕ ಡಾ. ಶ್ರೀಶೈಲ ನಾಗರಾಳ ಅವರು ಮೂಲತಃ ಅವಿಭಜಿತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಬಳಿಯ ಇಜೇರಿ ಗ್ರಾಮದವರು. ತಂದೆ- ಯಮನಪ್ಪ. ತಾಯಿ- ಬಸಮ್ಮ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ದಿಂದ ಪದವಿವರೆಗೂ  ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಡಾ ಎಂ ಎಂ ಕಲಬುರಗಿ ಅವರ ವೀರಶೈವ ಸಾಹಿತ್ಯ ಸಂಶೋಧನೆ (2001) ಕುರಿತು ಎಂ.ಫಿಲ್ ನಂತರ  'ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಜೀವನ ಮತ್ತು ಕೃತಿಗಳು' ವಿಷಯವಾಗಿ ಪಿ.ಎಚ್.ಡಿ  (2007) ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಜಿ.ಡಿ.ಎ.ಎಸ್ (ಡಾ. ಅಂಬೇಡ್ಕರ್ ಸ್ಟಡಿ) ಪದವೀಧರರು. ಕನ್ನಡ ಜಾನಪದ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಹೊಂದಿದ್ದು, ಹೈದ್ರಾಬಾದ್ -ಕರ್ನಾಟಕ ಶಿಕ್ಷಣ ಸಂಸ್ಥೆಯ ಕಲಬುರಗಿ, ಸುರಪುರ ಹಾಗೂ ಯಾದಗಿರಿಯ ಕಾಲೇಜುಗಳಲ್ಲಿ ಉಪನ್ಯಾಸಕರು, ಪ್ರಾಂಶುಪಾಲರು ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೀದರ್ ನ ಕರ್ನಾಟಕ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಸಂದರ್ಶಕ ಉಪನ್ಯಾಸಕರಾಗಿದ್ದಾರೆ.

ಕೃತಿಗಳು: ಕಲಬುರಗಿ ಶರಣ ಬಸವೇಶ್ವರ'(ಜೀವನ ಚರಿತ್ರೆ), ವೀರೇಂದ್ರ ಪಾಟೀಲ(ಜೀವನ ಚರಿತ್ರೆ), ಏಕಾಂತ ರಾಮಯ್ಯ(ಜೀವನ ಚರಿತ್ರೆ), ಉರಿವ ಬದುಕು (ಡಾ.ತೇಜಸ್ವಿ ಕಟ್ಟೀಮನಿ ಅವರ ವ್ಯಕ್ತಿಚಿತ್ರ), ಕೃತಿ ಲೋಕ (ವಿಮರ್ಶಾ ಕೃತಿ), ಆಕೃತಿ ( ವಿಮರ್ಶೆ-ಸಂಶೋಧನೆ), ಸಿದ್ಧರಾಮ(ಸಂಶೋಧನೆ), ಆರ್. ದೊಡ್ಡೆಗೌಡ(ಕೃತಿ ವಿಮರ್ಶೆ), ಜನಪದ ದೀಪ್ತಿ(ಜಾನಪದ ಸಂಶೋಧನೆ), ಕೆರೆಯ ಚಂದಮ್ಮ(ವ್ಯಕ್ತಿ ಚಿತ್ರ), ವಚನ ವಿವೇಕ(ವಿಮರ್ಶೆ), ಜಾನಪದ ವಿವೇಕ (ವಿಮರ್ಶೆ), ಹಂದರ(ವಿಮರ್ಶೆ, ಸಿರಿಗಂಧ(ಚಿಂಚೋಳಿ ತಾಲೂಕ ಸಾಹಿತ್ಯ) ಡಾ.ಎಂ.ಎಸ್.ಲಠ್ಠೆ:ಆತ್ಮೀಯ ನೆನಪು, ಬದುಕಿನ ಬುತ್ತಿ(ಸ್ಮರಣ ಗ್ರಂಥ), ಬೆಳ್ಳಿ ದಾಂಪತ್ಯ, ಕನ್ನಡ ದೀಪ್ತಿ(ಸ್ಮರಣ ಗ್ರಂಥ)., ಕಲಬುರಗಿ ಜಿಲ್ಲೆಯ ಜನಪದ ಆಹಾರ ಸಂಸ್ಕೃತಿ (ಶಂಶೋಧನೆ) ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಪ್ರಶಸ್ತಿ-ಗೌರವಗಳು: ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎರಡು ಬಾರಿ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ , ಲೋಹಿಯಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಬಹುಮಾನ, ಹೋರಾಟ ರತ್ನ ಪ್ರಶಸ್ತಿ, ಕಲ್ಯಾಣರತ್ನ ಪ್ರಶಸ್ತಿ, ಡಿ.ವಿ.ಜಿ ಪ್ರಶಸ್ತಿ, ಸಿದ್ಧಾರ್ಥ ಪ್ರಶಸ್ತಿ, ಅಮ್ಮ ಗೌರವ ಪ್ರಶಸ್ತಿ, ಕುವೆಂಪು ಪ್ರಶಸ್ತಿ-ಗೌರವಗಳು ಲಭಿಸಿವೆ.ಜೇವರ್ಗಿ ತಾಲೂಕಿನ 4ನೆಯ ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. 

 



 

ಶ್ರೀಶೈಲ ನಾಗರಾಳ

(01 Jun 1961)