About the Author

ಕಾದಂಬರಿಗಾರ್ತಿ, ಕವಯಿತ್ರಿ ಸುನೀತಿ ಉದ್ಯಾವರ ಪಿಎಚ್.ಡಿ. ನಿವೃತ್ತ ಅಧ್ಯಾಪಕರು. ಅವರು 1937 ಜುಲೈ 11 ಮಂಗಳೂರಿನಲ್ಲಿ ಜನಿಸಿದರು. ತಂದೆ ಶಾಂತಾರಾಮರಾವ್, ತಾಯಿ ಸೀತಾಬಾಯಿ. ಹುಟ್ಟೂರಿನಲ್ಲೇ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ ಅವರು ನಂತರ ಮುಂಬಯಿಯ ಖಾಲ್ಸಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.  ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸಿದರು. ನಂತರ ಮುಂಬಯಿಯ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ-ವಡಾಲಾದಲ್ಲಿ ಶಿಕ್ಷಕಿಯಾಗಿ 34ವರ್ಷಗಳ ಕಾರ್ಯ ನಿರ್ವಹಿಸಿದ ಅವರು ಮುಂಬಯಿ ವಿಶ್ವವಿದ್ಯಾಲಯಕ್ಕೆ “ಕಡೆಂಗೋಡ್ಲು ಶಂಕರಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಾತ್ರವಲ್ಲ ಅದೇ ವಿಶ್ವವಿದ್ಯಾಲಯದಲ್ಲಿ ಸುವರ್ಣ ಪದಕದೊಂದಿಗೆ ಕನ್ನಡ ಎಂ.ಎ. ಗಳಿಸಿದ ಹಾಗೂ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು.

‘ಸ್ನೇಹಸ್ತಾರಕ, ತಂಗಿಯ ಕಾಣಿಕೆ, ಋಣೋನ್ಮುಕ್ತಿ, ಕ್ಷಮಾಶೀಲೆ, ಅಶ್ವಾಸನೆ’ ಅವರ ಕಾದಂಬರಿಗಳು. ’ರೂಪಕ ವಲ್ಲರಿ’ ಅವರ ಗೀತನಾಟಕ. ಅಂಕಣ ಬರಹಗಾರ್ತಿಯಾಗಿ ‘ಶ್ರೀಸತ್ಯ’ ಪತ್ರಿಕೆಗಾಗಿ ‘ನಾರಿ ನಡೆದು ಬಂದ ದಾರಿ’ ಅಂಕಣ ಬರಹ, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ‘ಸಾಯಿದರ್ಶನ’ ಭಜನೆಗಳು ಅವರ ಮತ್ತಷ್ಟು ಕೃತಿಗಳು. ಮುಂಬಯಿ ವಿ.ವಿ.ದ ವರದರಾಜ ಆದ್ಯ ಸ್ವರ್ಣಪದಕ, ಮುಂಬಯಿ ಕರ್ನಾಟಕ ಸಂಘದ ಕವಿತಾ ಕೈಲಾಜೆ ಪ್ರಶಸ್ತಿ, ‘ವಾಙ್ಞಯ ಆರಾಧಕ ಕಡೆಂಗೋಡ್ಲು’ ಕೃತಿಗೆ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರನ್ನರಸಿವೆ. 

ಸುನೀತಿ ಉದ್ಯಾವರ

(11 Jul 1937)