About the Author

ಟಿ. ಎಸ್. ಗೋಪಾಲ್ ಅವರು ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು, ಆ ಕುರಿತ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಈವರೆಗೆ ಗೋಪಾಲ್‌ ಅವರು ಒಟ್ಟು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟವಾಗಿವೆ. ಜೊತೆಗೆ ವನ್ಯಜೀವನ ಹಾಗೂ ಪರಿಸರವನ್ನು ಕುರಿತ ಅನೇಕ ಆಕಾಶವಾಣಿ ಕಾರ್ಯಕ್ರಮ ಸರಣಿಗಳನ್ನೂ ನಿರ್ವಹಿಸಿದ್ದಾರೆ. ನಾಗರಹೊಳೆ ವನ್ಯಜೀವಿ ಸಂರಕ್ಷಣಾ ಶಿಕ್ಷಣ ಯೋಜನೆಯ ಸಂಯೋಜಕರಾಗಿ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿಮಂಡಳಿಯ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಣೆಯ ಅನುಭವ ಕೂಡ ಅವರಿಗಿದೆ. 'ನಿಸರ್ಗ' ಹಾಗೂ 'ಹಸಿರು-ಉಸಿರು' ಪತ್ರಿಕೆಗಳ ಸಂಪಾದಕತ್ವವನ್ನೂ ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳೊಡನೆ ಬಿ. ಎ. ಹಾಗೂ ಎಂ. ಎ. ಪದವಿ ಪಡೆದ ಟಿ. ಎಸ್. ಗೋಪಾಲ್ ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ ಅವರು 2013ರಲ್ಲಿ ಸೇವೆಯಿಂದ ಸ್ವಯಂನಿವೃತ್ತಿ ಪಡೆದುಕೊಂಡಿದ್ದಾರೆ. ಸದ್ಯ, ಕನ್ನಡ ಭಾಷೆಯ ಬಳಕೆ-ಕಲಿಕೆ ಕುರಿತ ಅವರ ಅಂಕಣಗಳು ʼಕಣಜ ಅಂತರಜಾಲ ಜ್ಞಾನಕೋಶʼ ದಲ್ಲಿ ಪ್ರಕಟವಾಗುತ್ತಿದೆ.

ಟಿ. ಎಸ್.‌ ಗೋಪಾಲ್