About the Author

ಡಾ.ವಿ.ಚಂದ್ರಶೇಖರ ನಂಗಲಿ  ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು  ಶ್ರೀಮತಿ ಗೌರಮ್ಮ ಮತ್ತು ಶ್ರೀ ವೆಂಕಟಾಚಲಪತಿ. ಎನ್, ಇವರ ಮಗನಾಗಿ 24.09.1956 ರಂದು ಜನಿಸಿದರು. ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯಲ್ಲಿ. ಬೆಳೆದದ್ದು ಕೋಲಾರ ಜಿಲ್ಲೆಯ ಮುಳುಬಾಗಲ್ ತಾಲೂಕಿನ ಗಡಿಗ್ರಾಮ ನಂಗಲಿ/ ನಂಗ್ಲಿಯಲ್ಲಿ.

ನಂಗಲಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಬಿ.ಎಚ್.ಎಸ್ ಶಾಲೆಯಲ್ಲಿ ಪಡೆದರು. ತಮ್ಮ ಎಂ.ಎ (ಕನ್ನಡ) ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ಭಾಷಾವಿಜ್ಞಾನದಲ್ಲಿ ಚಿನ್ನದಪದಕವನ್ನೂ ಗಳಿಸಿದ ಕೀರ್ತಿಗೆ ಪಾತ್ರರಾದರು. ಕನ್ನಡದಲ್ಲಿ ಚಾರಣ ಸಾಹಿತ್ಯ - ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಮಹಾಪ್ರಬಂಧವನ್ನು ಸಲ್ಲಿಸಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಅಧ್ಯಾಪಕರಾಗಿ ಚಿಕ್ಕಬಳ್ಳಾಪುರ, ಯರಗಟ್ಟಿ, ಹಾನಗಲ್, ಗುಬ್ಬಿ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮಾರ್ಕ್ಸ್ ವಾದಿ ವಿಮರ್ಶೆ, ನಾ ನಿಲ್ಲುವಳಲ್ಲ, ನಿರ್ ಬೀಜೀಕರಣದ ವಿರಾಟ್ ಸ್ವರೂಪ, ಕಾಡು ಮತ್ತು ತೋಪು, ನಾ ನಿಮ್ಮೊಳಗು, ತಿಟ್ಹತ್ತಿ ತಿರುಗಿ,  ನಡೆದುದೆ ದಾರಿ,  ಆಲಿಸಯ್ಯ ಮಲೆಯಕವಿ ಹಸಿರು ಪಿರಮಿಡ್, ಗಂಗನ ಶಿರಸ್ಸು, ನೆಲ ಮುಟ್ಟುವ ಪ್ರೀತಿ, ಕುವೆಂಪು ವಿರಚಿತ ಕನ್ನಡ ಭಾಷಾ ಸಂವಿಧಾನ ಡಿ.ಆರ್.ನಾಗರಾಜ (2007) : ಕೀರ್ತಿಶೇಷ ಡಿ.ಆರ್.ನಾಗರಾಜ ಅವರ ಬದುಕು - ಬರಹ ಕುರಿತು ಕನ್ನಡದ ಮೊದಲನೇ ಪುಸ್ತಕವನ್ನು ಪ್ರಕಟಿಸಿದ್ಧಾರೆ. ಅಲ್ಲಮಪ್ರಭು (2010) : ಅಲ್ಲಮಪ್ರಭು ವಚನಗಳನ್ನು ಕುರಿತು ಕನ್ನಡದಲ್ಲಿರುವ ಪ್ರಮುಖ ಬರಹಗಾರರ ವಿಚಾರಪೂರ್ಣ ಲೇಖನಗಳ ಸಂಕಲನವನ್ನೂ ಹೊರತಂದಿದ್ದಾರೆ. ತೇಪೆಗಳು (2013) : ವಿದ್ಯಾರ್ಥಿ ದೆಸೆಯಿಂದ ಹಿಡಿದು ಪ್ರಿನ್ಸಿಪಾಲ್ ವರೆಗೆ ಬರೆದ ಕವನಗಳ ಸಂಕಲನವಾಗಿದೆ. ಚಿನ್ನಿ ಮತ್ತು ಮುತ್ತು ಎಂಬ ಕಾಲ್ಪನಿಕ ಪಾತ್ರಗಳ ಸಂವಾದಕಾವ್ಯ ಸಂಕಲನವೂ ಪ್ರಕಟವಾಗಿದೆ.

ಕೋಲಾರದ ಗಡಿಭಾಗದ ವಿ.ಕೋಟೆ ಮಂಡಲಂ (AP) ನಡಮಂತರಂ ಎಂಬ ಗಿರಿಜನ ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿ ಕೃಷಿಯನ್ನು ಆರಂಭಿಸಿದರು. ಕೌಂಡಿನ್ಯ ಮೀಸಲು ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗಿರಿಜನ ಗ್ರಾಮದಲ್ಲಿ ಮತ್ತು ಹೊಸಕೋಟೆ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ನಂಗಲಿಯವರು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ತಮ್ಮ ಕೃತಿಗಳ ಮೂಲಕ ಹಸಿರು ಕಾಳಜಿಯ ಚಿಂತನಾಕ್ರಮವನ್ನು ಗಟ್ಟಿಯಾಗಿ ರೂಪಿಸುತ್ತಾ ಹಸಿರು ಓದಿನ ವಿಮರ್ಶೆಯ Green reading & Eco-Criticism ಬರಹಗಳನ್ನು ನೀಡುತ್ತಿದ್ದಾರೆ. 

ಇವರಿಗೆ 58 ನೇ ಕನ್ನಡ ರಾಜ್ಯೋತ್ಸವ ತವರೂರು ಸನ್ಮಾನ ಪ್ರಶಸ್ತಿ,  58 ನೇ ಕನ್ನಡ ರಾಜ್ಯೋತ್ಸವ ಸನ್ಮಾನ, ಡಾ.ಬಿ.ಆರ್.ಅಂಬೇಡ್ಕರ್ ಗೌರವ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.  13 ನೇ ಕೋಲಾರಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ,  2016 ನೇ ಸಾಲಿನಲ್ಲಿ ಡಾ.ಜಿ.ಎಸ್. ಶಿವರುದ್ರಪ್ಪ ಸ್ಮಾರಕ ಪ್ರಶಸ್ತಿ ಪಡೆದಿದ್ದಾರೆ.   2019 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ : 'ಕುವೆಂಪು ಸಿರಿಗನ್ನಡ ಪ್ರಶಸ್ತಿ' ಯೂ ಇವರಿಗೆ ಸಂದಿದೆ.

 

ವಿ. ಚಂದ್ರಶೇಖರ ನಂಗಲಿ

(24 Sep 1956)