ಚಿಕ್ಕನಾಯಕನಹಳ್ಳಿಯಲ್ಲಿ 1941ರಲ್ಲಿ ಜನಿಸಿದ ಶ್ರೀ ಎಂ.ವಿ. ನಾಗರಾಜ ರಾವ್ ಅವರು ಕನ್ನಡ ಮತ್ತು ಹಿಂದಿ ಸ್ನಾತಕೋತ್ತರ ಪದವೀಧರರು. 37 ವರ್ಷಗಳ ಕಾಲ ಶಿಕ್ಷಣಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ, ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.
ಕಥೆ, ಕಾದಂಬರಿ, ಹಿಂದಿ ಮತ್ತು ಇಂಗ್ಲಿಷ್‌ನಿಂದ ಭಾಷಾಂತರ ಹೀಗೆ ಇವರ 190ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಜಗತ್‌ಪ್ರಸಿದ್ಧ ಲೇಖಕ ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 27 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವ್ಯಾಕರಣ, ಪ್ರಬಂಧ ಸೇರಿದಂತೆ ಮಕ್ಕಳಿಗಾಗಿ 180ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. 'ಶೃಂಗಾರ ಪ್ರಕಾಶನ' ಸಂಸ್ಥೆ ಆರಂಭಿಸಿ 352 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಐದು ಬಾರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದ್ದರು. ನಾಲ್ಕು ಬಾರಿ ರೋಟರಿ ಸಂಸ್ಥೆಯ ಅಧ್ಯಕ್ಷ, ಮೂರು ಬಾರಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ, ಎರಡು ಬಾರಿ ತುಮಕೂರು ಜಿಲ್ಲೆಯ ಪ್ರಾಚಾರ್ಯರ / ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರ ಸೇವೆಗೆ ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಇವರ 'ಕಂಪನ' ಕಾದಂಬರಿ ಚಲನಚಿತ್ರವಾಗಿ ಪ್ರಸಿದ್ಧವಾಗಿದೆ. ನಾಡಿನ ಪ್ರಸಿದ್ದ ಪತ್ರಿಕೆಗಳಲ್ಲಿ 350ಕ್ಕೂ ಹೆಚ್ಚು ಲೇಖನಗಳು, 14 ಕಾದಂಬರಿ ಗಳು ಧಾರಾವಾಹಿಯಾಗಿ ಪ್ರಕಟವಾಗಿವೆ.
ಸುರೇಶ್ ಸೋಮಪುರ ಅವರ 'ಅಘೋರಿಗಳ ನಡುವೆ', 'ಕಂಪನ', 'ನಾಲ್ಕನೆಯ ಆಯಾಮ' ಇತ್ತೀಚೆಗೆ 'ಮಹಾಯೋಗಿನಿ' ಕಾದಂಬರಿಗಳನ್ನು ಅನುವಾದಿಸಿದ್ದು ಜನಪ್ರಿಯ ಕೃತಿಗಳೆನಿಸಿವೆ.
ಹಾಸನದಲ್ಲಿ ನಡೆದ 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ತುಮಕೂರು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.