About the Author

ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಧಾರ್ಮಿಕ, ವೈದಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರುಗಳಿಸಿರುವ ಲೇಖಕ ವಸಂತಕುಮಾರ ಪೆರ್ಲ. ಅವರು ಕಾಸರಗೋಡಿನ ಪುಟ್ಟ ಊರಾದ ಪೆರ್ಲದಲ್ಲಿ 1958ರ ಜುಲೈ 2ರಂದು ಜನಿಸಿದರು. ಈ ಪೆರ್ಲ ಭರಿನ ಹೆಸರಿಗೆ ಕೀರ್ತಿ ತಂದವರಲ್ಲಿ ವಸಂತಕುಮಾರ್ ಒಬ್ಬರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಳತ್ಕ್ತಡ್ಕ ಶಾಲೆಯಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪೂರೈಸಿದರು. ಪದವಿ, ಉನ್ನತ ಪದವಿಯನ್ನು ಮತ್ತು ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆೆ. 

ಹೈಸ್ಕೂಲ್ ವಿದ್ಯಾಭ್ಯಾಸದ ಕಾಲದಲ್ಲೇ ಕಥೆಗಳನ್ನು ಬರೆಯ ತೊಡಗಿದ ಅವರು ಬೆಂಗಳೂರಿನ ಪ್ರಜಾಪ್ರಭುತ್ವ ವಾರಪತ್ರಿಕೆಯಲ್ಲಿ ಉಪಸಂಪಾದಕ-ವರದಿಗಾರರಾಗಿ ಔದ್ಯೋಗಿಕ ಜೀವನವನ್ನು ಆರಂಭಿಸಿದರು. ಆನಂತರ ಕರ್ನಾಟಕದ ಹಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಅಂಕಣಗಾರ, ವರದಿಗಾರರಾಗಿ ದುಡಿದು ಪ್ರಸಿದ್ಧರಾದರು. ಆನಂತರ ಆಕಾಶವಾಣಿಗೆ ಸೇರ್ಪಡೆಗೊಂಡರು. ಕರ್ನಾಟಕದ ಹಾಸನ, ಮೈಸೂರು ಕಾರವಾರ ಮೊದಲಾದ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಅವುಗಳನ್ನು ವಿಶೇಷ ರೀತಿಯಲ್ಲಿ ಬೆಳೆಸಿದರು. ಸುಮಾರು 29 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

ಡಾ.ಪೆರ್ಲ ಅವರ ಪ್ರತಿಭೆ, ಪಾಂಡಿತ್ಯ, ಸಾಮರ್ಥ್ಯ ಅಪ್ರತಿಮವಾದುದು. ಅವರ ಹಲವಾರು ಸಂದರ್ಶನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಟಿ.ವಿ ಚಾನೆಲ್ ಗಳಲ್ಲಿ ಪ್ರಸಾರವಾಗಿವೆ. ಹಲವಾರು ಸ್ಮರಣ ಸಂಚಿಕೆ. ಅಭಿನಂದನ ಗ್ರಂಥಗಳಲ್ಲಿ ವಿದ್ವತ್ ಪೂರ್ಣ ಲೇಖನಗಳು ಪ್ರಕಟವಾಗಿವೆ. ಮನೆಮಾತು ಹವ್ಯಕ ಕನ್ನಡವಾಗಿದ್ದರೂ ತುಳು ಭಾಷೆಗೆ ಮಾಡಿದ ಅಸದೃಶ ಸೇವೆಯು ಗಣನೀಯವಾದದ್ದು. ಆಕಾಶವಾಣಿಯ ಮೂಲಕ ಸಾರ್ವಜನಿಕವಾಗಿ ಮತ್ತು ತುಳು ಸಾಹಿತ್ಯ ರಚನೆಯ ಮೂಲಕ ಅವರು ಮಾಡಿದ ತುಳು ಭಾಷಾ ಸೇವೆಯು ವಿಶೇಷವಾಗಿದೆ. ಅವರ ಕವನಗಳು ತುಳು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಂಡಿವೆ. ಅವರ ತುಳು ಕೃತಿಗಳ ಅಧ್ಯಯನವನ್ನು ಸ್ನಾತಕೊತ್ತರ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.  

ಕೃತಿಗಳು- ಹತ್ತರೊಡನೊಂದು, ನಾನು ಮತ್ತು ಗಣೇಶ(ಕಥಾಸಂಕಲನ). ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ(ಕವನ ಸಂಕಲನ). ತಪಸ್ವಿನಿಯ ಮಡಿಲಲ್ಲಿ(ಕಾದಂಬರಿ). ಅಭ್ಯಾಸ, ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಜಾನಪದ ಒಳನೋಟಗಳು(ಸಂಶೋಧನಾ ಕೃತಿ).  ಕಾಡಾನೆಗಳ ದವಡೆಯಲ್ಲಿ(ಪ್ರವಾಸ ಕಥನ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪೆರ್ಲ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ, ಕಯ್ಯಾರ ಸಾಹಿತ್ಯ ಪ್ರಶಸ್ತಿ, ಕಾವ್ಯಗಂಗಾ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್. ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ. 

ವಸಂತಕುಮಾರ ಪೆರ್ಲ

(02 Jul 1958)