About the Author

ವೀಣಾ ಶಾಂತೇಶ್ವರ ಮೂಲತಃ ಬಾಗಲಕೋಟೆಯವರು. ಇವರು ಜನಿಸಿದ್ದು 22-02-1945ರಲ್ಲಿ. ಎಂ.ಎ., ಎಂ.ಲಿಟ್, ಪಿಎಚ್.ಡಿ. ಹಿಂದಿ ರಾಷ್ಟ್ರಭಾಷಾ ವಿಶಾರದ, ಫ್ರೆಂಚ್ ಸರ್ಟಿಫಿಕೇಟ್ ಕೋರ್ಸ್ ಮಾಡಿ ಕರ್ನಾಟಕ ಕಲಾ ಕಾಲೇಜು, ಧಾರವಾಡದಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ.

ಮುಳ್ಳುಗಳು, ಕೊನೆಯ ದಾರಿ, ಬಿಡುಗಡೆ (ಕಾದಂಬರಿ), ಶೋಷಣೆ, ಗಂಡಸರು ಕಾದಂಬರಿಗಳನ್ನು ರಚಿಸಿದ್ದಾರೆ.  ಕುರಿಗಾಹಿ ಬಲ್ಲೇಶ್ವರ (ನಿರಾಳ ಅವರ ಹಿಂದಿ ಕಾದಂಬರಿ), ಅಷ್ಟ (ಅಮೆರಿಕನ್ ಕಥೆಗಳ ಅನುವಾದ) ಕೃತಿಗಳನ್ನು ಅನುವಾದ ಮಾಡಿದ್ದಾರೆ.

ಸಂಚಿ ಹೊನ್ನಮ್ಮ (ವಿಮರ್ಶೆ) ಮಹಿಳೆಯರ ಸಣ್ಣ ಕತೆಗಳು (ಸಂಪಾದಿತ), ಕನ್ನಡದ ಸಣ್ಣಕಥಾ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ (ವಿಮರ್ಶೆ), ಅಭಿವ್ಯಕ್ತಿ (ಸ್ತ್ರೀವಾದಿ ಸಾಹಿತ್ಯದ ಬಗ್ಗೆ ವಿವಿಧ ಲೇಖನಗಳು) ಕೃತಿಗಳು ಪ್ರಕಟಗೊಂಡಿದೆ.  ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ: ಮಲ್ಲಿಕಾ ಪ್ರಶಸ್ತಿ ಮತ್ತು ರತ್ನಮ್ಮ ಹೆಗಡೆ ಬಹುಮಾನ; ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಗಂಡಸರು ಕಾದಂಬರಿಗೆ ಪ್ರಜಾವಾಣಿ ಪತ್ರಿಕೆಯ ಬಹುಮಾನ, ಶಾಶ್ವತಿ ಸಂಸ್ಥೆಯ ಸದೋದಿತಾ' ಪ್ರಶಸ್ತಿ, ಮಾಸ್ತಿ ಪ್ರತಿಷ್ಠಾನದ ಪ್ರಶಸ್ತಿ ೨೦೧೧ ಕರ್ನಾಟಕ ಸರ್ಕಾರದ ದಾನಚಿಂತಾಮಣಿ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.   ವೀಣಾ ಅವರ ಕಥೆಗಳು ಭಾರತೀಯ ಭಾಷೆಗಳು ಸೇರಿದಂತೆ ಇಂಗ್ಲಿಷ್ ಮತ್ತು ಫ್ರೆಂಚ್‌ಗೆ ಅನುವಾದಿತವಾಗಿವೆ, ಕರ್ನಾಟಕ ಲೇಖಕಿಯರ ಸಂಘದ ೫ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನಾಧ್ಯಕ್ಷೆಯಾಗಿ ೨೦೦೩,ರಲ್ಲಿ ಆಯ್ಕೆ ಆಗಿ ಸೇವೆ ಸಲ್ಲಿಸಿದ್ದಾರೆ.

ಕಾಲೇಜು ವಿದ್ಯಾಭ್ಯಾಸದಿಂದ ಇಲ್ಲಿಯತನಕ ಧಾರವಾಡವನ್ನು ತಮ್ಮ ಆಡುಂಬೊಲವಾಗಿ ಮಾಡಿಕೊಂಡವರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ವ್ಯಕ್ತಿಶೋಧದ ಮಹಾತ್ವಾಕಾಂಕ್ಷೆಯಲ್ಲಿ ಆರಂಭವಾದ ನವ್ಯ ಸಾಹಿತ್ಯ ಸಂದರ್ಭದಲ್ಲಿ ತಮ್ಮ ಬರಹವಣಿಗೆ ಆರಂಭಿಸಿದ ವೀಣಾ ಸ್ತ್ರೀಶೋಧದಲ್ಲಿ ತನ್ಮಯರಾಗಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಅನಾಯಾಸವಾಗೆನ್ನುವಂತೆ ಅದನ್ನು ಸಮುದಾಯದ ಸ್ಥಾಪಿತ ಮೌಲ್ಯಗಳ ಶೋಧವಾಗಿ ಹಿಗ್ಗಿಸುತ್ತಾರೆ. ಮಾನವೀಯ ಸಂಬಂಧಗಳ ಸಂಕೀರ್ಣತೆ ಮತ್ತು ಸತ್ಯಾಸತ್ಯತೆಗಳ ಹುಡುಕಾಟದ ಆಯಾಮವೂ ಇವರ ಕತೆಗಳ ಬಹುಮುಖಿ ನೆಲೆಗಳನ್ನು ವಿಸ್ತರಿಸುತ್ತದೆ. ಬದಲಾಗುತ್ತಾ ಹೋಗುವ ಸನ್ನಿವೇಶಗಳಲ್ಲಿಯೂ ಹೆಣ್ಣಿನ ಮೂಲ ಸವಾಲುಗಳು ರೂಪಾಂತರಗಳಲ್ಲಿ ಎದುರಾಗುವ ಬಗೆಯನ್ನು ಅಪಾರ ಸೂಕ್ಷ್ಮತೆಯಲ್ಲಿ ಹಿಡಿಯುವ ಲೇಖಕಿ ವೀಣಾ ಬದುಕಿನ ಅಪರಿಹಾರ್ಯ ಸಂದರ್ಭಗಳಿಗೆ ಒಡ್ಡಿಕೊಳ್ಳುವ ಮನುಷ್ಯನ ಧೀರೋದ್ಧಾತತೆಯನ್ನು, ಬದುಕಿನ ಅದಮ್ಯ ಸೆಳೆತವನ್ನು ತಮ್ಮ ಸಾರ್ಥಕ, ಪ್ರಯೋಗಶೀಲ ಕಥನಗಳಲ್ಲಿ ಕಟ್ಟಿಕೊಟ್ಟ ಕಾರಣಕ್ಕಾಗಿಯೇ ಇವರು ಮಹತ್ವದ ಲೇಖಕಿ .

 

ವೀಣಾ ಶಾಂತೇಶ್ವರ

(22 Feb 1945)

BY THE AUTHOR