About the Author

ಸಾಹಿತಿ ಸೀತಾರಾಮಶಾಸ್ತ್ರಿಗಳು ಮೂಲತಃ ನಂಜನಗೂಡಿನವರು. ತಂದೆ- ನಾಗೇಶ ಶಾಸ್ತ್ರಿಗಳು. ತಾಯಿ- ಪಾರ್ವತಮ್ಮ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಶೃಂಗೇರಿಗೆ ಬಂದ ಅವರು, ಸೋದರ ಮಾವಂದಿರ ಸಂಪರ್ಕದಲ್ಲಿ ಬೆಳೆದರು. ಗುರುಕುಲದಲ್ಲಿ ಶಿಕ್ಷಣ ಪ್ರಾರಂಭಿಸಿದರು. ಈ ವೇಳೆ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಸೀತಾರಾಮಶಾಸ್ತ್ರಿಗಳ ಸಹಪಾಠಿಗಳಾಗಿದ್ದರು. ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ ಅವರು ಶಂಕರ ಮಠದ ಅಧಿಕಾರಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಆನಂತರ ಗೀರ್ವಾಣ ಭಾರತಿ ಸಂಸ್ಕೃತ ಮಹಾಲಯದಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಈ ವೇಳೆ ಗುರುಕುಲ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರು. ಶಂಕರ ಮಠಕ್ಕೆ ಭೇಟಿ ನೀಡಿದ ರವೀಂದ್ರನಾಥ ಠಾಕೂರರಿಂದ ಗುರುಕುಲ ಶಿಕ್ಷಣ ಪದ್ಧತಿ ಪ್ರಶಂಸೆ ಪಡೆದರು. ಸ್ವಾತಂತ್ರ್ಯಕ್ಕಾಗಿ ಹೋರಾಟದ ಸಂದರ್ಭದಲ್ಲಿ  ಮದನ ಮೋಹನ ಮಾಳವೀಯ, ಬಾಲಗಂಗಾಧರ ತಿಲಕ್, ಗಾಂಧೀಜಿ ಅವರ ಸಂಪರ್ಕ ದೊರೆಯಿತು. ಬೋಧನಾವೃತ್ತಿ ತೊರೆದು ಸರಕಾರಿ ಕೆಲಸ ಹಿಡಿದು ‘ಗ್ರಾಮಜೀವನ’ ಪತ್ರಿಕೆಯ ಸಂಪಾದಕತ್ವವಹಿಸಿಕೊಂಡರು. ಅದನ್ನೂ ತೊರೆದು ಕೇಸರಿ ಪತ್ರಿಕೆಯಿಂದ ಪ್ರಭಾವಿತರಾಗಿ ‘ವೀರಕೇಸರಿ’ ಪತ್ರಿಕೆ ಪ್ರಾರಂಭಿಸಿದರು. ಮುಂದೆ ವೀರಕೇಸರಿ ಸೀತಾರಾಮಶಾಸ್ತ್ರಿಗಳೆಂದೇ ಪ್ರಸಿದ್ಧಿ ಪಡೆದರು. ಕೆಲಕಾಲ ನ್ಯಾಯ ವಿಧಾಯಕ ಸಭೆಯ ಸದಸ್ಯರಾಗಿದ್ದರು. 

ಟಿಪ್ಪು ಸುಲ್ತಾನನ ಸುತ್ತ ಹೆಣೆದ ಕಾದಂಬರಿ ‘ದೌಲತ್.’ ಆರು ಮುದ್ರಣ ಕಂಡ ಕಾದಂಬರಿ. ಶ್ರೀರಂಗರಾಯ, ನಗರದ ರಾಣಿ, ಬಿದನೂರರಾಣಿ, ಗೋಲ್ಕೊಂಡ ಪತನ, ರಾಜಪಂಜರ, ಅದಿಲ್‌ಷಾಹಿಯ ಕಡೆಯ ದಿನಗಳು, ಛತ್ರಪತಿ ಶಿವಾಜಿ ಸೇರಿದಂತೆ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಶಾಸ್ತ್ರಿಗಳು ಕ್ಯಾನ್ಸರ್ ನಿಂದಾಗಿ 77ನೇ ವಯಸ್ಸಿನಲ್ಲಿ ನಿಧನರಾದರು.

ವೀರಕೇಸರಿ ಸೀತಾರಾಮಶಾಸ್ತ್ರಿ

(04 Nov 1893)