About the Author

ವಿಠ್ಠಪ್ಪ ಗೋರಂಟ್ಲಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳದ ಭಾಗ್ಯನಗರದವರು. ನಾಲ್ಕನೇ ತರಗತಿಯವರೆಗೆ ಮಾತ್ರ ಓದು. ಬಡತನದ ಮಧ್ಯೆಯೇ ನೇಕಾರಿಕೆಯ ಕಸುಬು ಹೊಂದಿದ್ದರು. 

ಪಿ.ಬಿ. ಧುತ್ತರಗಿ ಅವರ ನಾಟಕ ತಾಯಿ ಕರುಳು’ ನಲ್ಲಿ ಸರಸ್ವತಿ ಎಂಬ ಸ್ತ್ರೀ ಪಾತ್ರದ ಮೂಲಕ ರಂಗ ಪ್ರವೇಶಿಸಿದರು. ಸದಾಣಂಧ ಜ್ಞಾನ ಯೋಗಾಶ್ರಮ ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಕನ್ನಡ ಪತ್ರಿಕೆಗಳಿಗೆ ಪತ್ರಗಳನ್ನು ಬರೆಯುತ್ತಲೇ ಲೇಖನಗಳನ್ನು ಬರೆಯುವ ಸಾಮರ್ಥ್ಯ ಪಡೆದುಕೊಂಡ ವಿಠ್ಠಪ್ಪ ಗೋರಂಟ್ಲಿ ಅವರು, ಮುಂದೆ  ಲಂಕೇಶ್ ಪತ್ರಿಕೆಯಲ್ಲಿ ಜನಪರ ಕಾಳಜಿಯ ಲೇಖನಗಳನ್ನು ಬರೆಯುತ್ತಾ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಬಂದವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಕೊಪ್ಪಳ ಜಿಲ್ಲಾ ರಂಗ ಮಾಹಿತಿ-ಇವರ ಕೃತಿಯನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದೆ. 

ಕಪ್ಪೊಡಲ ಕರೆ, ಈ ನೆಲೆದೊಡಲಲ್ಲಿ-ಇವರ ಕವನ ಸಂಕಲನಗಳು, ಪತ್ರಿಕಾ ಅಕಾಡೆಮಿಯ ಆಹ್ವಾನದ ಮೇರೆಗೆ ಇವರು ಬರೆದ ತನಿಖಾ ವರದಿ ಎಂಬ ಕಿರು ಪುಸ್ತಕ ಪ್ರಕಟವಾಗಿದೆ. 1999ರಲ್ಲಿ ರಣಕಹಳೆ, ಕೊಪ್ಪಳ ಕಿರಣ ಎಂಬ ಸ್ವತಂತ್ರ ದಿನಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. 

ಕನ್ನಡದ ಆದ್ಯತೆಗಾಗಿ ನಡೆದ ಗೋಕಾಕ ಚಳವಳಿ, ತುಂಗಾಭದ್ರಾ ಉಳಿಸಿ, ಕುದ್ರಿಮೋತಿ ಪ್ರಕರಣ, ಬೆಂಡಿಗೇರಿ ಪ್ರಕರಣ ಹೀಗೆ ಹತ್ತು ಹಲವು ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.  ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಡಿವಿಜಿ ಸದ್ಭಾವನಾ ಪ್ರಶಸ್ತಿಗಳು ಲಭಿಸಿವೆ. 

ವಿಠ್ಠಪ್ಪ ಗೋರಂಟ್ಲಿ