About the Author

ವೈ.ಬಿ.ಕಾಂತರಾಜುರವರು 1971 ಏಪ್ರಿಲ್ 2ರಂದು ಹಾಸನ ತಾಲ್ಲೂಕಿನ ಯಲಗುಂದ ಗ್ರಾಮದಲ್ಲಿ ಜನಿಸಿದರು. ತಂದೆ ವೈ.ಜೆ.ಬಸವರಾಜು, ತಾಯಿ ಶ್ರೀಮತಿ ಪುಟ್ಟವೀರಮ್ಮ, ಅರಸೀಕೆರೆ ತಾಲ್ಲೂಕಿನ ಬಿಡಾದರಹಳ್ಳಿಯ ಶ್ರೀ ಭೂದೇಶ್ವರ ಸ್ವಾಮಿ ಮಠದಲ್ಲಿ ಮೆಟ್ರಿಕ್‌ ವರೆಗೆ ಶಿಕ್ಷಣ ಪಡೆದ ಇವರು ಪೋಲಿಸ್ ಕಾನ್ಸಟೇಬಲ್ ಆಗಿ ಆಯ್ಕೆಗೊಂಡು ಪ್ರಸ್ತುತ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಆರಕ್ಷಕ ಇಲಾಖೆಯಲ್ಲಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಹಾಗೂ ಪರಿಸರ ಜಾಗೃತಿಯಲ್ಲಿ ನಿರತರಾಗಿದ್ದಾರೆ. ಕಾವ್ಯ, ಕಥೆ, ವಚನಗಳನ್ನು ಬರೆಯುತ್ತಿರುವ ಇವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ “ಸಿರಿ ಸಮೃದ್ಧಿ” ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಸದ್ಯ “ಪ್ರಕೃತಿ ಸಿರಿ" ಕವನ ಸಂಕಲನ ಮುದ್ರಣ ಹಂತದಲ್ಲಿದೆ. ಅಲ್ಲದೆ ರಸ್ತೆಯ ಬದಿಗಳಲ್ಲಿ ಸಾಲುಮರಗಳನ್ನು ನೆಟ್ಟು ಬೆಳೆಸುತ್ತಿರುವ ಇವರು ಇಂದಿನ ಯುವಕರಿಗೆ ಆದರ್ಶವಾಗಿದ್ದಾರೆ. ಇವರ ಸಾಧನೆಗಾಗಿ 2013-14 ನೇ ಸಾಲಿನಲ್ಲಿ ನೆಹರು ಜನೋತ್ಸವ ಅಂಗವಾಗಿ ಉತ್ತಮ ಸಾಧಕ ವ್ಯಕ್ತಿ ಪ್ರಶಸ್ತಿ, 2013-14 ನೇ ಸಾಲಿನಲ್ಲಿ ಸುವರ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುವರ್ಣಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2014–15 ನೆಯ ಸಾಲಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖಾ ವತಿಯಿಂದ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೆ ಕರ್ನಾಟಕ ರತ್ನಶ್ರೀ, ಭಾರತ ಭೂಷಣ ಕಾಯಕಶ್ರೀ, ಕಾಯಕಶ್ರೀ ರಾಜ್ಯ ಪ್ರಶಸ್ತಿಗಳು ಇವರ ಸೇವೆಗೆ ಸಂದಿವೆ.

ವೈ.ಬಿ.ಕಾಂತರಾಜ್‌