ಶೂದ್ರದೀವಿಗೆ

Author : ಸಿ.ಎಂ.ಗೋವಿಂದರೆಡ್ಡಿ

Pages 96

₹ 90.00




Year of Publication: 2019
Published by: ಮಹಿಮಾ ಪ್ರಕಾಶನ
Address: # 1393/2, ಸಿ.ಎಚ್‌.-31, 6ನೇ ಅಡ್ಡರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು-570004
Phone: 9448759815

Synopsys

ಆದಿಕವಿ ಪಂಪನು ಆದಿಪುರಾಣದಲ್ಲಿ ಸ್ಪೃಶ್ಯಶೂದ್ರರು ಮತ್ತು ಅಸ್ಪೃಶ್ಯಶೂದ್ರರು ಎಂಬ ವಿಶಾಲ ವ್ಯಾಪ್ತಿಯಲ್ಲಿ ‘ಶೂದ್ರ’ ಶಬ್ದವನ್ನು ಬಳಸಿದ್ದಾನೆ. ನಾಲ್ಕನೇ ವರ್ಣದ ಶೂದ್ರರು ಮತ್ತು ನಾಲ್ಕೂ ವರ್ಣಗಳಿಗೆ ಸೇರದ ಪಂಚಮರು ‘ಶೂದ್ರದೀವಿಗೆ’ ಎಂಬ ಶಬ್ದದಲ್ಲಿ ಸೇರಿಬಿಡುತ್ತಾರೆ. ಮೇಲು ಕೀಳು ಎಂಬ ವರ್ಣ ಸಂಘರ್ಷವು ನಮ್ಮ ದೇಶದ ಜಾತಿಪದ್ಧತಿಯ ಸಮಾಜದಲ್ಲಿ ಜನ್ಮಾಧಾರಿತ ಅಸಮಾನತೆಯು ತಲೆಯೆತ್ತಿದಾಗಿನಿಂದಲೂ ಇದೆ! ಇಂಥದೊಂದು ಯುಗಯಾತ್ರೀ ಜಾತಿ ಸಂಘರ್ಷವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಸಂಕಲ್ಪದಿಂದ ಗೆಳೆಯ ಸಿ.ಎಂ.ಗೋವಿಂದರೆಡ್ಡಿ ಯವರು ‘ಶೂದ್ರದೀವಿಗೆ’ಯನ್ನು ರೂಪಿಸಿದ್ದಾರೆ. ಇಲ್ಲಿನ ವಿವಿಧ ದೃಶ್ಯಗಳು ಘಟನಾಪರಂಪರೆ ಮಾತ್ರವಲ್ಲ! ಶೋಷಣೆಯ ಪರಂಪರೆಯೂ ಹೌದು! ಇರುವೆಗಿರುವ ಸ್ವಾಭಿಮಾನ ಮನುಷ್ಯರಿಗೂ ಇರುತ್ತದೆ. ಪೀಡಿಸಲು ಬಂದವನನ್ನು ಇರುವೆಯು ಪ್ರಾಣವನ್ನೂ ಲೆಕ್ಕಿಸದೆ ಕಚ್ಚುವಂತೆ ಮನುಷ್ಯರೂ ಹೇಗೆ ಕಚ್ಚುತ್ತಾರೆ ಎಂಬುದನ್ನು ದೃಶ್ಯೀಕರಿಸುವಲ್ಲಿ ಗೋವಿಂದರೆಡ್ಡಿಯವರು ಯಶಸ್ವಿ ಆಗಿದ್ದಾರೆ. ಶಂಬೂಕನ ತಲೆದಂಡ, ಏಕಲವ್ಯನ ಹೆಬ್ಬೆರಳು, ಬುದ್ಧನ ಕರುಣಾಮೈತ್ರಿ, ಮಧುವಯ್ಯ ಹರಳಯ್ಯರ ನೇತ್ರಹರಣ, ಅಂಬೇಡ್ಕರ್ ಎತ್ತಿಹಿಡಿಯುವ ಸಾಮಾಜಿಕ ನ್ಯಾಯ - ಇವೆಲ್ಲಾ ಘಟನೆಗಳು ದೀವಟಿಗೆಯಾಗಿ ಜ್ವಲಿಸುತ್ತ ಜಾತ್ಯಂಧರ ಕಣ್ಣು ಕುಕ್ಕುವುದು!

 

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Excerpt / E-Books

ಹಿರಿಯರಾದ ಡಾ. ಗೋವಿಂದರೆಡ್ಡಿಯವರಲ್ಲಿ ಮೊದಲು ಕ್ಷಮೆ ಕೇಳುತ್ತೇನೆ. ಒಂದೂವರೆ ವರ್ಷಗಳಿಂದ ತಮ್ಮ ಈ ‘ಶೂದ್ರದೀವಿಗೆ’ ನಾಟಕಕ್ಕೆ ನಾನು ಬರೆಯುವ ಮುನ್ನುಡಿಗಾಗಿ ಕಾದಿದ್ದಾರೆ. ಶೂದ್ರದೀವಿಗೆಯ ಹಸ್ತಪ್ರತಿಯನ್ನು ಎಂದೋ ಓದಿ ಮುಗಿಸಿದ್ದೆ. ಆದರೆ, ಈ ನಾಟಕ ಕುರಿತು ಬರೆಯಲು ಬೇಕಾದ ಸಿದ್ಧಮಾದರಿಯೊಂದು ನನ್ನ ಕಣ್ಣಿಗೆ ಬೀಳುತ್ತಲೇ ಇರಲಿಲ್ಲ. ಹಾಗೆಂದು ಇದು ಘನಗಂಭೀರ ಆಲೋಚನೆಗಳನ್ನು ತನ್ನ ಓದುಗನಲ್ಲಿ ಸೃಷ್ಟಿಸಬಲ್ಲ, ಸಂಕೀರ್ಣತೆಯುಳ್ಳ ನಾಟಕವಲ್ಲ ಎಂದೇನೂ ಅಲ್ಲ. ಇದು ಕೇವಲ ‘ನಾಟಕ’ ಅಲ್ಲ. ಹಲವು ನಾಟಕಗಳ ಗುಚ್ಛ. ಕಾವ್ಯಾವಳಿ, ಕಥಾವಳಿ ಎಂಬ ಪಾರಿಭಾಷಿಕ ಶಬ್ದಗಳನ್ನು ನಾವು ಬಳಸುತ್ತೇವೆ. ಹಲವು ಕವಿತೆಗಳು, ಹಲವು ಕತೆಗಳನ್ನು ಒಳಗೊಂಡ ಸಂಕಲನಗಳನ್ನು ಹೀಗೆ ಕರೆಯುತ್ತೇವೆ. ಪ್ರತಿ ದೃಶ್ಯದಲ್ಲೂ ಹಲವು ಕಥಾನಕಗಳನ್ನು ಒಳಗೊಂಡ ಶೂದ್ರದೀವಿಗೆ ನಾಟಕವನ್ನು ‘ನಾಟಕಾವಳಿ’ ಎಂದು ಕರೆಯಲು ಸಾಧ್ಯವೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ವಿಶೇಷವೆಂದರೆ, ಗೋವಿಂದರೆಡ್ಡಿಯವರು ಈ ನಾಟಕವನ್ನು ಹಲವು ನಾಟಕಗಳ ಗುಚ್ಛ ಅಥವಾ ನಾಟಕಾವಳಿ ಎಂಬ ಕಲ್ಪನೆಯಲ್ಲಿ ಕಟ್ಟಿಲ್ಲ. ಕಾಲಾನುಕ್ರಮದ ವಿವಿಧ ವಿದ್ಯಮಾನಗಳನ್ನು ಹಲವು ದೃಶ್ಯಗಳಲ್ಲಿ ಬರೆಯುವ ಮೂಲಕ, ನಮ್ಮ ದೇಶದ ಕಾಲಾತೀತ ಸಮಸ್ಯೆಯೊಂದನ್ನು ನಿರೂಪಿಸುತ್ತಾರೆ. ಇಲ್ಲಿನ ಎಲ್ಲ ದೃಶ್ಯಗಳ ಕೇಂದ್ರಪ್ರಜ್ಞೆ ಒಂದೇ ಆಗಿದೆ. ಈ ದೇಶದ ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸಿ, ಅವರನ್ನು ಪರಂಪರಾಗತವಾಗಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡ ಬ್ರಾಹ್ಮಣ ಷಡ್ಯಂತ್ರವನ್ನು ನೇರವಾಗಿ ಇಲ್ಲಿ ನಿರೂಪಿಸಲಾಗಿದೆ. ಶೂದ್ರ ಪ್ರತಿಭೆಗಳನ್ನು ಹೊಸಕಿಹಾಕಿದ ನಿರಂತರ ನೋವಿನ ಚಿತ್ರಣ ಇಲ್ಲಿದೆ.

ಶಂಭೂಕ, ಏಕಲವ್ಯ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರನ್ನು ಕುರಿತು ನಮ್ಮಲ್ಲಿ ಬರೆಯದಿರುವ ಲೇಖಕನೇ ಇಲ್ಲ. ಪ್ರತಿಯೊಬ್ಬ ಪ್ರಜ್ಞಾವಂತ ಲೇಖಕನನ್ನು ಮನುಷ್ಯರ ಈ ಚಾರಿತ್ರಿಕ ನೋವಿನ ಸಂಗತಿಗಳು ಒಂದಲ್ಲಾ ಒಂದು ರೀತಿ ಕಾಡುತ್ತಲೇ ಬಂದಿವೆ. ಏಕಲವ್ಯನನ್ನು ಕುರಿತು ಕೈಲಾಸಂ, ಸಿದ್ಧಲಿಂಗಯ್ಯ ಮುಂತಾದ ಹಲವು ಲೇಖಕರು ನಾಟಕಗಳನ್ನು ಬರೆದಿದ್ದಾರೆ. ಏಕಲವ್ಯನನ್ನು ಕುರಿತು ಕುವೆಂಪು ‘ಬೆರಳ್ಗೆ ಕೊರಳ್’ ಹಾಗೂ ಶಂಭೂಕನನ್ನು ಇಟ್ಟುಕೊಂಡು ‘ಶೂದ್ರತಪಸ್ವಿ’ ಬರೆದಿದ್ದಾರೆ. ಬುದ್ಧನನ್ನು ಕುರಿತು ಕುವೆಂಪು ‘ಮಹಾರಾತ್ರಿ’ ಮತ್ತು ಬಿ.ಪುಟ್ಟಸ್ವಾಮಯ್ಯ ‘ಗೌತಮಬುದ್ಧ’ ಎಂಬ ಯಶಸ್ವೀ ನಾಟಕಗಳನ್ನು ಬರೆದಿದ್ದಾರೆ. ಡಾ. ಎಲ್.ಹನುಮಂತಯ್ಯ ಮತ್ತಿತರರು ಅಂಬೇಡ್ಕರ್ ಕುರಿತ ನಾಟಕಗಳನ್ನು ಬರೆದಿದ್ದಾರೆ. ಬಸವಣ್ಣನವರ ಹೋರಾಟದ ಹಿನ್ನೆಲೆಯಲ್ಲಿ ಲಂಕೇಶ್, ಕಾರ್ನಾಡ್, ಕಂಬಾರ್, ಶಿವಪ್ರಕಾಶ್, ಲಕ್ಷ್ಮೀಪತಿ ಕೋಲಾರ - ಹೀಗೆ ಸಾಲು ಸಾಲು ಪ್ರತಿಭಾವಂತ ಕನ್ನಡ ನಾಟಕಕಾರರು ನಾಟಕಗಳನ್ನು ರಚಿಸಿದ್ದಾರೆ.

ಭಾರತೀಯ ಸಂಸ್ಕೃತಿ ಹಲವು ಸ್ಮೃತಿಗಳ ಕಣಜವಾದರೂ; ಸಾಮಾನ್ಯವಾಗಿ ಭಾರತೀಯರು ತಮ್ಮ ಇತಿಹಾಸ ಹಾಗೂ ಪುರಾಣಗಳಲ್ಲಿ ಉಲ್ಲೇಖಿತವಾದ ಶೂದ್ರ ಸಂಕಟಗಳ ಸೂಕ್ಷ್ಮಗಳನ್ನು ಮರೆತು ಬಿಟ್ಟಿರುತ್ತಾರೆ. ನಮಗೆ ಪೂರ್ವದ ನೆನಪುಗಳೇ ಇರುವುದಿಲ್ಲ. ಅಥವಾ ಯಾರೋ ಬೇಕಂತಲೇ ನಮ್ಮ ಮೆದುಳನ್ನು ‘ನೆನಪಿನ ಕೋಶ’ ಮಾಸಿಹೋಗುವಂತೆ ಹಲವು ಮಾರ್ಜಕಗಳನ್ನು ಬಳಸಿ ತೊಳೆದುಬಿಟ್ಟಿರುತ್ತಾರೆ. ಮಿದುಳು ತೊಳೆಸಿಕೊಂಡ ಇಂಥವರಿಂದ ದೇಶದ ಪ್ರಗತಿಗೇ ಅಡ್ಡಿಯಾಗಿಬಿಡುತ್ತದೆ. ಸಮಕಾಲೀನ ವಿದ್ಯಾವಂತ ಶೂದ್ರ ತರುಣರಿಗೆ ಈ ರೋಗ ಇನ್ನೂ ಹೆಚ್ಚಾಗಿದೆ. ಅಕಸ್ಮಾತಾಗಿ ಯಾರಾದರೂ ಹಿರಿಯರು ಈ ನೆನಪುಗಳನ್ನು ಒತ್ತಿ ಹೇಳಿದರೆ, ಅಂತಹ ಹಿರಿಯರ ಬಗ್ಗೆಯೇ ಕೋಪಗೊಳ್ಳುವ ಅಸಹನೀಯ ವಾತಾವರಣದಲ್ಲಿ ನಾವಿದ್ದೇವೆ. ಆದರೆ ಪ್ರಜ್ಞಾವಂತವಾಗಿರುವ ಸೃಜನಶೀಲ ಮನಸ್ಸುಗಳಲ್ಲಿ ಮಾತ್ರ ಈ ನೆನಪುಗಳು ಮಾಸಿ ಹೋಗಿರುವುದಿಲ್ಲ. ಅವು ದೇವನೂರು ಮಹಾದೇವ ಅವರ ಮಾತಿನ ಹಾಗೆ ‘ರಕ್ತಕ್ಕೆ ಪಿಚ್ಚರ್ ಬಿಟ್ಟಂಗೆ ಕಾಣ್ತದೆ ಕಯ್ಯ..’ ಎಂಬಂತೆ ಕಾಣುತ್ತಲೇ ಇರುತ್ತದೆ. ನಮ್ಮ ಜನಪದ ಪರಂಪರೆ ಈ ನೆನಪಿನ ಸೋಜಿಗವನ್ನು ತನ್ನ ಒಡಲಲ್ಲಿ ಕಾಪಿಟ್ಟುಕೊಂಡು ಮುನ್ನಡೆದಿದೆ. ಶಿಷ್ಟ ಸಾಹಿತ್ಯದ ಸೃಜನಶೀಲರೂ ಮತ್ತೆ ಮತ್ತೆ ಈ ನೆನಪುಗಳ ಹಿನ್ನೆಲೆಯಲ್ಲಿ ಅಗಾಧ ಸಾಹಿತ್ಯ ಕೃತಿಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ಇಷ್ಟಾದರೂ ನಮ್ಮ ದೇಶದ ಶೂದ್ರ ತರುಣರ ಮನಸ್ಸಿಗೆ ಹತ್ತಿದ ಬ್ರಾಹ್ಮಣ್ಯದ ರೋಗ ಕಳೆಯುತ್ತಿಲ್ಲ.

ಪ್ರಾಚೀನ ಕಾಲದಿಂದಲೂ ಈ ದೇಶದ ದಲಿತರು, ಶೂದ್ರರು ಹಾಗೂ ಮಹಿಳೆಯರ ಪರವಾಗಿ ಮಾತನಾಡಿದ ಎಲ್ಲ ಧ್ವನಿಗಳನ್ನು ವ್ಯವಸ್ಥಿತವಾಗಿ ಅಡಗಿಸಿದ ಸತ್ಯಗಳೂ ನಮ್ಮ ಕಣ್ಣೆದುರಿಗೆ ಇವೆ. ಮೊಟ್ಟಮೊದಲ ಬಾರಿಗೆ ಮನುಷ್ಯ ಸಮಾಜದ ನೋವುಗಳನ್ನು ಗ್ರಹಿಸಿದವನು ಮಹಾತ್ಮ ಬುದ್ಧ. ಆ ಧರ್ಮದ ಕತೆ ಏನಾಯಿತು ಎಂಬುದನ್ನು ನಾವು ಬಲ್ಲೆವು. ಬೌದ್ಧ ಧರ್ಮವನ್ನು ಅನುಸರಣೆ ಮಾಡಿದ ಅಶೋಕನಂತಹ ಚಕ್ರವರ್ತಿಗಳು ಈ ದೇಶದಲ್ಲಿ ಸಮಸಮಾಜದ ಕನಸು ಕಂಡರು. ಬ್ರಾಹ್ಮಣರ ದ್ರೋಹಗಳನ್ನು ಹತ್ತಿರದಿಂದ ಕಂಡಿದ್ದ ಅಶೋಕ ಚಕ್ರವರ್ತಿ; ಅವರನ್ನು ಹದ್ದುಬಸ್ತಿನಲ್ಲಿಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದ. ಅವರಿಂದ ರಾಜ್ಯದಲ್ಲಿನ ಗೋವುಗಳನ್ನು ಕಾಪಾಡುವ ಉದ್ದೇಶದಿಂದ ‘ಗೋಹತ್ಯಾ ಕಾನೂನು’ ಜಾರಿಗೆ ತಂದಿದ್ದ. ಅಲ್ಲದೆ ಬ್ರಾಹ್ಮಣರ ಹೊಟ್ಟೆಪಾಡಿನ, ತಟ್ಟೆಕಾಸಿನ ಆದಾಯ ಮೂಲವಾಗಿದ್ದ ದೇವಾಲಯಗಳನ್ನು ಬಂದುಮಾಡಿಸಿ ಎಲ್ಲೆಲ್ಲೂ ಬೌದ್ಧವಿಹಾರಗಳು ತಲೆಯೆತ್ತುವಂತೆ ಮಾಡಿದ್ದ. ಬ್ರಾಹ್ಮಣರಿಗೆ ಮಾಡಲು ಕೆಲಸವೇ ಇಲ್ಲದಂತಹ ಹೀನಾಯ ಪರಿಸ್ಥಿತಿ ಇತ್ತು. ಅಶೋಕನ ವಂಶದ ಏಳು-ಎಂಟನೇ ತಲೆಮಾರಿನ ಬೃಹದ್ರಥ ಮೌರ್ಯನೆಂಬ ರಾಜ, ಬ್ರಾಹ್ಮಣರ ಈ ಸ್ಥಿತಿಗೆ ಮರುಕಪಟ್ಟು ಆ ಜನಾಂಗದ ಪುಷ್ಯಮಿತ್ರಶುಂಗನಿಗೆ ತನ್ನ ರಾಜ್ಯದಲ್ಲಿ ಸೇನಾಪತಿಯ ಅಧಿಕಾರ ಕೊಡುತ್ತಾನೆ. ಆ ಸೇನಾಪತಿ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಅಶೋಕನ ವಂಶಸ್ಥ ದೊರೆ ಬೃಹದ್ರಥ ಮೌರ್ಯನನ್ನು ಕೊಲೆ ಮಾಡಿ, ತಾನೇ ಅಧಿಕಾರಕ್ಕೆ ಬಂದು ರಾಜನಾಗುತ್ತಾನೆ. ಅದು ಬಹುಶಃ ಏಳನೆಯ ಶತಮಾನ ಇರಬಹುದು. ಅದು ಶಂಕರಾಚಾರ್ಯರ ಕಾಲಘಟ್ಟ. ಶಂಕರಾಚಾರ್ಯ ಭಾರತದ ಉದ್ದಗಲಕ್ಕೂ ಸಂಚರಿಸಿ ಬೌದ್ಧರನ್ನು ಕೊಲ್ಲಿಸುತ್ತಾ ಹೋಗುತ್ತಾನೆ. ಶಂಕರಾಚಾರ್ಯ, ಬೌದ್ಧ ಭಿಕ್ಷುಗಳನ್ನು ಚರ್ಚೆಗೆ ಕರೆದು ತಲೆದಂಡದ ಪಣವೊಡ್ಡುತ್ತಿದ್ದ. ಬ್ರಾಹ್ಮಣರನ್ನು ಚರ್ಚೆಯಲ್ಲಿ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಚರ್ಚೆಯಲ್ಲಿ ಸೋತ ಬೌದ್ಧರು ಪ್ರಾಣ ಕಳೆದುಕೊಳ್ಳಬೇಕಿತ್ತು. ಬೌದ್ಧ ಧರ್ಮ ಭಾರತದ ನೆಲದಿಂದ ಸಂಪೂರ್ಣವಾಗಿ ಕಣ್ಮರೆಯಾಗಲು ಶಂಕರಾಚಾರ್ಯನ ತಂತ್ರಗಾರಿಕೆಯೇ ಮುಖ್ಯ ಕಾರಣವೆಂಬುದನ್ನು ನಾವು ತಿಳಿಯಬಹುದು.

ಬೌದ್ಧಧರ್ಮದ ನಾಶದಿಂದಾಗಿ ಈ ದೇಶದ ತಳಸಮುದಾಯಗಳು ಮತ್ತೆ ಬ್ರಾಹ್ಮಣರ ವಂಚನೆಗೆ ಗುರಿಯಾಗಿ ಸಂಕಟ ಅನುಭವಿಸತೊಡಗಿದವು. ಇದನ್ನೆಲ್ಲ ಗ್ರಹಿಸಿದ ಬಸವಣ್ಣ ವರ್ಣಾಶ್ರಮದ ವಿರುದ್ಧ ಬಹುದೊಡ್ಡ ಆಂದೋಲನ ಕಟ್ಟಿದ. ಅಲ್ಲಿ ಶೂದ್ರ, ದಲಿತ ಹಾಗೂ ಮಹಿಳಾ ಸಮುದಾಯಗಳಿಗೆ ಸಮಾನತೆ ಇತ್ತು. ಬ್ರಾಹ್ಮಣ ಧರ್ಮ ಮತ್ತೆ ಖಿಲವಾಗುವ ಅಪಾಯವೂ ಇತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಬ್ರಾಹ್ಮಣರು ಮಹಾರಾಜ ಬಿಜ್ಜಳನ ಕಿವಿ ಕಚ್ಚಿ ಬಸವಣ್ಣನೂ ಸೇರಿದಂತೆ ಒಂದು ಲಕ್ಷದ ತೊಂಬತ್ತಾರು ಸಾವಿರ ಶರಣರ ಕಗ್ಗೊಲೆ ಮಾಡಿಸಿದರು. ಬ್ರಿಟಿಷರು ಬಂದ ಮೇಲೆ ಮಹಾತ್ಮಾಗಾಂಧಿ ಮತ್ತೆ ದಲಿತ, ಶೂದ್ರ ಹಾಗೂ ಮಹಿಳೆಯರ ಪರವಾಗಿ ಮಾತನಾಡತೊಡಗಿದ್ದನ್ನು ಸಹಿಸದ ಮಹಾರಾಷ್ಟ್ರದ ಚಿತ್ಪಾನನ ಬ್ರಾಹ್ಮಣ ಜಾತಿಗೆ ಸೇರಿದ ನಾಥೂರಾಮ್ ಗೋಡ್ಸೆ, ಗಾಂಧಿಯನ್ನು ಗುಂಡಿಟ್ಟು ಕೊಂದ. ಅದೇ ಕಾಲದಲ್ಲಿ ಅಂಬೇಡ್ಕರ್ ಅವರೂ ಅಸ್ಪೃಶ್ಯ ಹಾಗೂ ಮಹಿಳಾ ಸಮುದಾಯದ ಪರವಾಗಿ ಬಲವಾದ ಹೋರಾಟ ರೂಪಿಸಿದ್ದರು. ಅವರ ಅಂತ್ಯವೂ ಹೀಗೆ ಅನುಮಾನಾಸ್ಪದ ರೀತಿಯಲ್ಲಿ ಆಗಿರುವುದನ್ನು ನಾವು ಮರೆಯುವಂತಿಲ್ಲ.

ಶೂದ್ರದೀವಿಗೆ ನಾಟಕವನ್ನು ಅರ್ಥಮಾಡಿಕೊಳ್ಳಲು ನಮಗೆ ಇಂತಹ ಚಾರಿತ್ರಿಕ ಸೂಕ್ಷ್ಮಗಳ ಅರಿವು ಇದ್ದೇ ಇರಬೇಕಾಗುತ್ತದೆ. ಹಲವು ಬಿಡಿ ಬಿಡಿ ದೃಶ್ಯಗಳ ಮೂಲಕ ಹರಡಿಕೊಂಡ ಈ ನಾಟಕದ ಕೇಂದ್ರ ಒಂದೇ ಆಗಿದೆ. ಭಾರತದ ಪರಂಪರಾಗತ ಶೂದ್ರ ಸಂಕಟಗಳ ಸುತ್ತಲೇ ಈ ನಾಟಕ ಕರುಳ ಸಂಬಂಧಿಯ ಸಂಕಟದಂತೆ ಸುತ್ತಿಕೊಂಡಿದೆ.

ಮೊದಲ ಎರಡು ದೃಶ್ಯಗಳಲ್ಲಿ ತ್ರೇತಾಯುಗದ ಶಂಭೂಕ ಹತ್ಯೆಯ ಘಟನೆ ಇದೆ. ರಾಮ ಲಕ್ಷ್ಮಣರು ಮಾತನಾಡುತ್ತಾ ಕುಳಿತಿರುತ್ತಾರೆ. ರಾಮರಾಜ್ಯ ‘ನ್ಯಾಯದ ರಾಜ್ಯ’ ಎಂಬ ನಂಬಿಕೆಯೊಂದು ಅಲ್ಲಿನ ಪ್ರಜೆಗಳಲ್ಲಿ ಇರುತ್ತದೆ. ಅರಮನೆಯ ಮಹಾದ್ವಾರಕ್ಕೆ ಕಟ್ಟಿದ ನ್ಯಾಯದ ಗಂಟೆಯನ್ನು ಮೊಳಗಿಸುವ ಅಗತ್ಯ ಯಾರಿಗೂ ಇರುವುದಿಲ್ಲ. ಆದರೆ, ಇದ್ದಕ್ಕಿದ್ದ ಹಾಗೆ ಬ್ರಾಹ್ಮಣನೊಬ್ಬ ಬಂದು ಆ ನ್ಯಾಯದ ಗಂಟೆಯನ್ನು ಬಾರಿಸುತ್ತಾನೆ. ಶೂದ್ರನೊಬ್ಬ ತಪಸ್ಸು ಮಾಡುತ್ತಿರುವುದು ಈ ಬ್ರಾಹ್ಮಣನಿಗೆ ಬಹುದೊಡ್ಡ ಅನ್ಯಾಯವೆಂಬಂತೆ ಕಂಡಿರುತ್ತದೆ. ರಾಮರಾಜ್ಯ ಎಂದರೆ, ವರ್ಣಾಶ್ರಮ ಧರ್ಮವನ್ನು ಪರಿಪಾಲಿಸುವ, ಶೂದ್ರರ ವಿದ್ಯೆಯನ್ನು ನಿರಾಕರಿಸುವ, ಅಸಮಾನತೆಯನ್ನು ಪೋಷಿಸುವ ರಾಜ್ಯ. ಗೂಢಚಾರರು ಮತ್ತು ಚಾಡಿಕೋರರು ತುಂಬಿಕೊಂಡಿದ್ದ ರಾಜ್ಯ. ಅಲ್ಲಿ ಸಮಾನತೆಗೆ ಅವಕಾಶವೇ ಇರಲಿಲ್ಲ. ಚಾಡಿಕೋರರ ಹಾಗೂ ಗೂಢಚಾರರ ಮಾತು ಕೇಳಿ ರಾಮ ತನ್ನ ಗರ್ಭಿಣಿ ಹೆಂಡತಿಯನ್ನೇ ಕಾಡಿಗೆ ಅಟ್ಟುವ ಮೂಲಕ ಕಠೋರತೆಯನ್ನು ತೋರಿಸಿರುತ್ತಾನೆ. ವರ್ಣಾಶ್ರಮ ಧರ್ಮದ ಪೋಷಣೆಯ ಕಾರಣದಿಂದಾಗಿ ಜಾತಿಯೇ ಗೊತ್ತಿಲ್ಲದ ಸೀತೆಗೆ ಅಯೋಧ್ಯೆಯ ಸಿಂಹಾಸನವೇರಲು ಸಾಧ್ಯವಾಗುವುದಿಲ್ಲ. ಅವಳಿಗೆ ಸಿಂಹಾಸನವೇರುವ ಸಂದರ್ಭ ಬಂದಾಗಲೆಲ್ಲ ಒಂದಲ್ಲ ಒಂದು ಕಾರಣ ನೀಡಿ ಕಾಡಿಗೆ ಕಳುಹಿಸುತ್ತಿದ್ದರು. ಸೀತೆ ಜನಕ ಮಹಾರಾಜನಿಗೆ ಮಣ್ಣಿನಲ್ಲಿ ಸಿಕ್ಕ ಅನಾಥ ಶಿಶು. ಅವಳ ನಿಜವಾದ ತಂದೆ, ತಾಯಿ, ಜಾತಿ, ಮತ ಇತ್ಯಾದಿಗಳ ಬಗ್ಗೆ ಆ ಕಾಲದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಜಾತಿಹೀನಳಾದ ಸೀತೆಯಂತಹ ಹೆಣ್ಣುಮಗಳನ್ನು ರಾಮರಾಜ್ಯದಲ್ಲಿ ಜಾರಿಯಲ್ಲಿದ್ದ ನಿಯಮಾವಳಿಗಳಿಗೆ ಕಾಪಾಡುವ ಶಕ್ತಿ ಇರಲಿಲ್ಲ. ಶಂಭೂಕನ ಪ್ರಸಂಗದಲ್ಲೂ ಇದನ್ನೇ ಕಾಣುತ್ತೇವೆ. ಶೂದ್ರನ ತಪಸ್ಸನ್ನು ನಾಯಿಯ ಹಾಲಿಗೆ ಹೋಲಿಸುವ ಬ್ರಾಹ್ಮಣನ ಮನಸ್ಸನ್ನು ನಾವು ಮತ್ತೆ ಮತ್ತೆ ಪ್ರಶ್ನಿಸಲೇಬೇಕು. ರಾಮ, ಶಂಭೂಕನನ್ನು ಕೊಲ್ಲಲು ನಿರ್ಧರಿಸುತ್ತಾನೆ. “ಕರುಣಾಮೂರ್ತಿಯಾದ ನೀನು ನಿನ್ನ ಪ್ರಜೆಯಾದ ನನ್ನನ್ನು ಕೊಲ್ಲಬೇಡ”ವೆಂದು ಶಂಭೂಕ ಪರಿಪರಿಯಾಗಿ ವಿನಂತಿಸಿದರೂ ರಾಮರಾಜ್ಯದ ಕಾನೂನು ಹಾಗೂ ರಾಜಧರ್ಮಕ್ಕೆ ತಕ್ಕ ಹಾಗೆ ಶ್ರೀರಾಮಚಂದ್ರ ಶಂಭೂಕನಿಗೆ ಮರಣದಂಡನೆ ವಿಧಿಸುತ್ತಾನೆ. ವಿದ್ಯೆ ಕಲಿಯಲು ಹೊರಟ ಶೂದ್ರನನ್ನು ಕೊಲ್ಲುವುದು ಪರಮ ಧರ್ಮವೆಂಬ ನಂಬಿಕೆ, ಶ್ರೀರಾಮನಲ್ಲಿ ಇದ್ದದ್ದು ವಿಷಾದನೀಯ.

ಶೂದ್ರದೀವಿಗೆಯ ಮೂರು ಮತ್ತು ನಾಲ್ಕನೇ ದೃಶ್ಯಗಳಲ್ಲಿ ದ್ವಾಪರಯುಗದ ಶೂದ್ರ ಸಂಕಟವನ್ನು ಗೋವಿಂದರೆಡ್ಡಿ ತೆರೆದಿಡುತ್ತಾರೆ. ವಿದ್ಯೆ ಕಲಿಯುವ ಕುತೂಹಲದಿಂದ ಬ್ರಾಹ್ಮಣ ಜನಾಂಗದ ದ್ರೋಣಾಚಾರ್ಯನ ಬಳಿಗೆ ಏಕಲವ್ಯ ಬರುವುದನ್ನು ನಾವೆಲ್ಲಾ ಬಲ್ಲೆವು. ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಮಾತ್ರ ವಿದ್ಯೆ ಕಲಿಸುವ ನೀತಿ ಆ ಕಾಲದಲ್ಲಿತ್ತು. ಆ ಕಾನೂನಿಗೆ ಅನುಗುಣವಾಗಿ ದ್ರೋಣ ಏಕಲವ್ಯನಿಗೆ ವಿದ್ಯೆ ಕಲಿಸುವುದಿಲ್ಲ. ಏಕಲವ್ಯ ಸ್ವವಿದ್ಯಾರ್ಥಿ. ತನ್ನ ಪಾಡಿಗೆ ತಾನು, ಸ್ವಂತ ಅಭ್ಯಾಸ ಬಲದಿಂದ ವಿದ್ಯೆಯನ್ನು ಕಲಿಯುತ್ತಾನೆ. ಏಕಲವ್ಯನ ಪಾತ್ರದ ಮೂಲಕ ಈ ನಾಟಕದಲ್ಲಿ ನಾವು ಒಂದು ವಿಶಿಷ್ಟ ಲೋಕಸತ್ಯವನ್ನು ಮನಗಾಣಬಹು ದಾಗಿದೆ. ಸಾವಿರಾರು ವರ್ಷಗಳಿಂದ ಶೂದ್ರ ತರುಣ ತರುಣಿಯರು ಸ್ವಯಂಭುಗಳ ಹಾಗೆ ತಮಗೆ ತಾವೇ ವಿದ್ಯೆ ಕಲಿತಿದ್ದಾರೆ. ಅವರಿಗೆ ಯಾವ ಗುರುವಿನ ಅಗತ್ಯವೂ ಇರುವುದಿಲ್ಲ. ಇದಕ್ಕೆ ಏಕಲವ್ಯನೇ ಸಾಕ್ಷಿ. ತ್ರೇತಾಯುಗ, ದ್ವಾಪರ ಯುಗಗಳಲ್ಲೂ ಶೂದ್ರರಿಗೆ ಅಕ್ಷರದ ಜ್ಞಾನವಿರಲಿಲ್ಲ. ಆದರೂ ವ್ಯಾಸ, ವಾಲ್ಮೀಕಿಯಂತಹ ಶೂದ್ರ ಪ್ರತಿಭೆಗಳು ರಾಮಾಯಣ, ಮಹಾಭಾರತಗಳಂತಹ ಜಗತ್ಪ್ರಸಿದ್ಧ ಮಹಾಕಾವ್ಯಗಳನ್ನು ತಮ್ಮ ಸ್ವಪ್ರತಿಭೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾವು ನಮ್ಮದೆಂದು ಹೆಮ್ಮೆಪಡುವ ವೇದ ಉಪನಿಷತ್ತುಗಳ ಕರ್ತೃಗಳೂ ಬಹುತೇಕ ಶೂದ್ರರೇ ಆಗಿದ್ದರು. ಬ್ರಾಹ್ಮಣ ಪರಮಾಧಿಕಾರ ಪ್ರಾರಂಭವಾಗುವುದಕ್ಕಿಂತ ಮುಂಚೆ ನಮ್ಮ ದೇಶದಲ್ಲಿ ಶೂದ್ರರು ವಿದ್ಯೆಯನ್ನು ಕಲಿತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಶೂದ್ರ ಪ್ರತಿಭೆಗಳ ಈ ಲೋಕೋಪಕಾರವನ್ನು ಬ್ರಾಹ್ಮಣರು ತಮ್ಮ ಹೊಟ್ಟೆಪಾಡಿನ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ಅಕ್ಷರ ನಿರಾಕರಣೆಯ ತರುವಾಯ ಈ ದೇಶದ ಅಸಂಖ್ಯಾತ ಶೂದ್ರರು ತಮ್ಮ ಬಾಯಿಯಲ್ಲೇ ಜನಪದ ಮಹಾಕಾವ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಶೂದ್ರರನ್ನು, ಅಸ್ಪೃಶ್ಯರನ್ನು ಹಾಗೂ ಮಹಿಳೆಯರನ್ನು ಎಷ್ಟೇ ಹತ್ತಿಕ್ಕಿದರೂ ಅವರು ಮತ್ತೆ ಮತ್ತೆ ವಿಭಿನ್ನ ಮಾದರಿಗಳಲ್ಲಿ ಚಿಗುರುತ್ತಿದ್ದರು. ಇದೇ ಕಾರಣದಿಂದಾಗಿ ಶೂದ್ರದೀವಿಗೆ ನಾಟಕ ಕಾಲದ ನಿರ್ಧಯತೆಯನ್ನು ತೋರಿಸಿಕೊಡುತ್ತದೆ. ಕಾಲಾಂತರಗಳಲ್ಲಿ ವೈದಿಕ ದಬ್ಬಾಳಿಕೆಯ ಚಹರೆಯನ್ನು ಕಟ್ಟಿಕೊಡುತ್ತದೆ.

ಗೌತಮಬುದ್ಧನನ್ನು ಐದು ಮತ್ತು ಆರನೇ ದೃಶ್ಯಗಳಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಮುಖ್ಯವಾಗಿ ಸಂನ್ಯಾಸತ್ವ, ಯುದ್ಧವಿರೋಧಿ ನಿಲುವು ಮತ್ತು ಅಹಿಂಸಾ ತತ್ವದ ಸೂಕ್ಷ್ಮಗಳನ್ನು ನಿರೂಪಿಸಲಾಗಿದೆ. ಸಂನ್ಯಾಸತ್ವವೆಂಬುದು ಜಗತ್ತಿನ ವಿನಾಶ ಗುಣದಿಂದ ಬಿಡುಗಡೆ ಪಡೆದು ವಿನಾಶ ರಹಿತ ಪದವಿಯೊಂದರ ಹುಡುಕಾಟ. ಭೋಗ ಭಾಗ್ಯಗಳನ್ನು ಕಡೆಗಣಿಸಿ ಪರಮಾರ್ಥದಲ್ಲಿ ನಂಬಿಕೆಯನ್ನಿರಿಸಿ ಮುನ್ನಡೆಯಬೇಕಾದ ಸಂನ್ಯಾಸವು ಪ್ರಸ್ತುತ ಸಂದರ್ಭದಲ್ಲಿ ಯಾವ ಹಂತ ಮುಟ್ಟಿದೆ ಎಂಬ ಕಠೋರ ಸತ್ಯ ಇಲ್ಲಿ ಹೊಳೆಯುತ್ತದೆ. ಸಮಕಾಲೀನ ಸಂದರ್ಭದಲ್ಲಿ ನಮ್ಮ ದೇಶದ ಅನೇಕ ಸಂನ್ಯಾಸಿಗಳು ರಾಜಕೀಯ ಪರಮಾಧಿಕಾರ ಪಡೆಯಲು ಹವಣಿಸುತ್ತಿದ್ದಾರೆ. ದೇವರು, ಧರ್ಮದ ಹೆಸರಿನಲ್ಲಿ ಕೋಮುವಾದವನ್ನು, ಜಾತಿವಾದವನ್ನು ಜನರ ತಲೆಯಲ್ಲಿ ಬಿತ್ತುತ್ತಿದ್ದಾರೆ. ಐಷಾರಾಮಿ ಬದುಕು ಕಟ್ಟಿಕೊಂಡಿದ್ದಾರೆ. ರಾಮ ಕೃಷ್ಣ ಮತ್ತಿತರ ದೇವತೆಗಳ ಹೆಸರಿನಲ್ಲಿ ಪರಸ್ತ್ರೀಯರನ್ನು ಪಲ್ಲಂಗದ ಮೇಲೆ ಕೆಡವಿಕೊಂಡು ಅತ್ಯಾಚಾರ ಎಸಗುತ್ತಿದ್ದಾರೆ. ನ್ಯಾಯಾಲಯಗಳಿಗೆ ಅಲೆದು ಶಿಕ್ಷೆಗೂ ಗುರಿಯಾಗುತ್ತಿದ್ದಾರೆ. ಮಾನವ ಕಲ್ಯಾಣವೆಂಬುದು ಅವರಿಗೆ ಅಪದ್ಧವಾಗಿದೆ. ಸಮಕಾಲೀನ ಭಾರತೀಯ ಸಮಾಜದ ಸಂವೇದನೆ ಯುದ್ಧದಾಹದತ್ತ ಹೊರಳುತ್ತಿರುವುದು ವಿಷಾದನೀಯ. ಆಳುವವರೇ ಮನುಷ್ಯ ಹತ್ಯಾಕಾಂಡದ ರೂವಾರಿಗಳಾಗುತ್ತಿದ್ದಾರೆ. ಪರಸ್ಪರ ದ್ವೇಷದ ಬೆಂಕಿಯನ್ನು ಹೊತ್ತಿಸುತ್ತಿದ್ದಾರೆ. ಈ ಎಲ್ಲ ಸುಳುಹುಗಳೂ ಈ ನಾಟಕದಲ್ಲಿವೆ.

ಮುಂದಿನ ಎರಡು ದೃಶ್ಯಗಳಲ್ಲಿ ಗೋವಿಂದರೆಡ್ಡಿ ಕಲ್ಯಾಣ ಕ್ರಾಂತಿಯ ಚಹರೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬಸವಣ್ಣನಿಗೆ ಬೆಂಬಲವಾಗಿ ನಿಂತಿದ್ದವನು ಬಿಜ್ಜಳ ದೊರೆ. ಆ ಕಾಲದ ಕಸಪಯ್ಯ, ಕೇಸಿಮಯ್ಯ ಮುಂತಾದ ವೈದಿಕಶಾಹಿ ಸ್ವಾರ್ಥಿಗಳು ಬಿಜ್ಜಳನಲ್ಲಿ ಬಸವಣ್ಣನ ಬಗ್ಗೆ ಇಲ್ಲಸಲ್ಲದ ಚಾಡಿ ಮಾತುಗಳನ್ನು ಬಿತ್ತುತ್ತಾರೆ. ಮಧುವರಸ ಮತ್ತು ಹರಳಯ್ಯನ ಮಕ್ಕಳಿಗೆ ಬಸವಾದಿ ಶರಣರು ಮಾಡಿಸಿದ ಮದುವೆ, ಆ ಕಾಲದ ಬ್ರಾಹ್ಮಣರನ್ನು ಆತಂಕಕ್ಕೆ ತಳ್ಳುತ್ತದೆ. ಅಸ್ಪೃಶ್ಯ ಶೂದ್ರ ಹುಡುಗನಿಗೂ ಬ್ರಾಹ್ಮಣ ಕನ್ಯೆಗೂ ಮಾಡುವ ಈ ಮದುವೆಯಿಂದ ತಮ್ಮ ಬ್ರಾಹ್ಮಣ್ಯವೇ ನೆಲೆ ಕಳೆದುಕೊಳ್ಳುತ್ತದೆ ಎಂಬ ಭಯದ ಕಾರಣದಿಂದ ಅವರು ಶರಣಚಳುವಳಿಯನ್ನು ಬಗ್ಗುಬಡಿಯುವ ನಿರ್ಧಾರಕ್ಕೆ ಬರುತ್ತಾರೆ. ಶರಣರ ಕಗ್ಗೊಲೆಗೆ ಸಂಚು ರೂಪಿಸುವ ಸೂಕ್ಷ್ಮವನ್ನು ನಾಟಕಕಾರರು ಈ ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಶೂದ್ರದೀವಿಗೆಯ ಮುಂದಿನ ನಾಲ್ಕು ದೃಶ್ಯಗಳಲ್ಲಿ ಅಂಬೇಡ್ಕರ್ ಅವರ ಆತಂಕಗಳು ಅನಾವರಣಗೊಂಡಿವೆ. ಶಂಭೂಕ, ಏಕಲವ್ಯ, ಬುದ್ಧ, ಬಸವಣ್ಣ ಪುರಾಣ ಮತ್ತು ಚರಿತ್ರೆಯ ಪುಟಗಳಿಂದ ಎದ್ದುಬಂದ ಪಾತ್ರಗಳು. ಅವು ಎಷ್ಟೇ ಹತ್ತಿರ ಎನಿಸಿದರೂ ದೂರ ನಿಲ್ಲುವ ಸಾಧ್ಯತೆಯೂ ಇರುತ್ತದೆ. ಆದರೆ ಅಂಬೇಡ್ಕರ್ ಹಾಗಲ್ಲ. ಅವರು ನಮ್ಮ ಕಾಲದ ಸಂಕಟಗಳ ಪ್ರತಿನಿಧಿ. ಅಂಬೇಡ್ಕರ್ ವಿದ್ಯಾರ್ಥಿಯಾಗಿದ್ದಾಗ, ತನ್ನ ಶಾಲೆಯ ಸವರ್ಣೀಯ ಸಹಪಾಠಿಗಳಿಂದ ಬಹುದೊಡ್ಡ ಅವಮಾನವನ್ನು ಅನುಭವಿಸುತ್ತಾರೆ. ಆ ಹುಡುಗರೇನೋ ಸಣ್ಣವರು. ದೊಡ್ಡವರ ನಡೆ ನುಡಿಯನ್ನು ಅನುಕರಣೆ ಮಾಡುವ ಅಮಾಯಕರು. ಆದರೆ ವಯಸ್ಸಾದ ಶಿಕ್ಷಕನೊಬ್ಬ, ಬಾಲಕ ಅಂಬೇಡ್ಕರ್ ಅವರ ಬಗ್ಗೆ ತೋರುವ ಅನಾದರ ನಿಜಕ್ಕೂ ನೋವು ತರುತ್ತದೆ. ಸಂಸ್ಕೃತ ಕಲಿಯಬೇಕೆಂಬ ಅಂಬೇಡ್ಕರ್ ಅವರ ಮನದಾಸೆಯನ್ನು ಹತ್ತಿಕ್ಕಿ ಆ ಶಿಕ್ಷಕ, “ದಡ್ಡಮುಂಡೆ ಗಂಡ; ಶೂದ್ರರು, ಅಸ್ಪೃಶ್ಯರು ಸಂಸ್ಕೃತ ಕಲಿಯಬಾರದು. ನೀವು ಅದಕ್ಕೆ ಅನರ್ಹರು. ನಿಮ್ಮ ನಾಲಿಗೆ ಸೋಕಿದರೆ ಸಾಕು, ಅದು ಅಪವಿತ್ರವಾಗಿಬಿಡುತ್ತದೆ. ಸಂಸ್ಕೃತ ಅಂದರೆ ಏನು ಅಂತ ತಿಳಿದುಕೊಂಡೆ? ಅದು ದೇವಭಾಷೆ! ಹಿಂದಿನ ಕಾಲದಲ್ಲಿ ಆಗಿದ್ದರೆ, ಇಷ್ಟಕ್ಕೇ ನಿನಗೆ ಉಗ್ರ ಶಿಕ್ಷೆ ವಿಧಿಸುತ್ತಿದ್ದರು. ನಿಮ್ಮಂತಹ ಧರ್ಮಲಂಡರು, ಅಧಿಕಪ್ರಸಂಗಿಗಳು ಹುಟ್ಟಿರೋದಕ್ಕೇ ಜಗತ್ತು ಹೀಗೆ ಕೆಡುತ್ತಾ ಇರೋದು” ಎಂದು ಹಂಗಿಸುತ್ತಾನೆ. ಈ ಮಾತುಗಳಲ್ಲಿ ಇರುವ ವಾಸ್ತವವೇ ನಮ್ಮ ಸಮಾಜವನ್ನು ಸದಾಕಾಲವೂ ಕೊಂದ ಕಾರ್ಕೋಟಕ ವಿಷವಾಗಿದೆ. ಅದೇ ಶಾಲೆಯ ಅಂಬೇಡ್ಕರ್ ಎಂಬ ಹೆಸರಿನ ಮತ್ತೊಬ್ಬ ಶಿಕ್ಷಕ, ನಮ್ಮ ಅಂಬೇಡ್ಕರ್ ಅವರ ಪ್ರತಿಭೆಯನ್ನು ಗುರುತಿಸುತ್ತಾನೆ. ಸಂಸ್ಕೃತ ಕಲಿಯುವ ಬಾಲಕನ ಆಸಕ್ತಿಗೆ ಬೆಂಬಲದ ಮಾತುಗಳನ್ನಾಡುತ್ತಾನೆ. ಅಂಬೇಡ್ಕರ್ ಅನುಭವಿಸಿದ ಅಸ್ಪೃಶ್ಯತೆಯ ಅವಮಾನಗಳನ್ನು ಸಹನೆಯಿಂದ ಕೇಳಿಸಿಕೊಳ್ಳುತ್ತಾನೆ. ಬಾಲಕನಲ್ಲಿರುವ ಕಲಿಕೆಯ ಹಠವನ್ನು ಬೆಂಬಲಿಸುತ್ತಾನೆ. 

Related Books