ಸದಭಿರುಚಿಯ ಕನ್ನಡ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಉದ್ದೇಶದಿಂದ ಲೇಖಕರು ಹಾಗೂ ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ ಅವರು 1995ರಲ್ಲಿ ಆರಂಭಿಸಿದ ರಾಜ್ಯದ ಗಮನಾರ್ಹ ಕನ್ನಡ ಪ್ರಕಾಶನ ಸಂಸ್ಥೆ ಅಂಕಿತ. ವೈವಿಧ್ಯಮಯ ಕೃತಿಗಳ ಪ್ರಕಟಣೆ, ಸಾಧ್ಯವಾದಷ್ಟು ಕಡಿಮೆ ಬೆಲೆ, ಉತ್ತಮ ವಿನ್ಯಾಸ, ಉತ್ತಮ ಕಾಗದ ಬಳಕೆ, ಅಚ್ಚುಕಟ್ಟಾದ ಮುದ್ರಣ ಇವು ಅಂಕಿತ ಕೃತಿಗಳ ವೈಶಿಷ್ಟ್ಯಗಳು. ಇಲ್ಲಿಯವರೆಗೆ 788ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟೆಿಸಿರುವುದು ಅಂಕಿತ ಪ್ರಕಾಶನದ ಹಿರಿಮೆ.
ಕನ್ನಡದಲ್ಲಿ ಪುಸ್ತಕಗಳ ಮಾರಾಟ ಮಳಿಗೆಗಳ ಕೊರತೆಯನ್ನು ಗಮನಿಸಿ ಆರಂಭಿಸಿದ್ದು, ಅಂಕಿತ ಪುಸ್ತಕ ಮಳಿಗೆ. 1998ರಲ್ಲಿ ಆರಂಭವಾದ ಈ ಮಳಿಗೆ ಪ್ರಸ್ತುತ ರಾಜ್ಯದ ಪ್ರಮುಖ ಕನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲೊಂದಾಗಿದೆ.
ಕನ್ನಡದಲ್ಲಿ ಮೊದಲ ಬಾರಿಗೆ ವರ್ಣರಂಜಿತ ಪುಸ್ತಕ ಪ್ರಕಟಣೆ, ಪ್ರಚಾರ ಪೋಸ್ಟರ್ ಗಳ ಬಳಕೆ, ‘ಅಂಕಿತ ಪ್ರತಿಭೆ’ ಮಾಲೆಯನ್ನು ಆರಂಭಿಸಿ ಯುವ ಬರಹಗಾರರನ್ನು ಗುರುತಿಸುವ ಪ್ರಯತ್ನ ಪುಸ್ತಕ ಬಿಡುಗಡೆ, ಲೇಖಕರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಪುಸ್ತಕ ಸಂಸ್ಕೃತಿಯನ್ನು ಹರಡುವ ಪ್ರಯತ್ನದಲ್ಲಿ ಸತತವಾಗಿ ತೊಡಗಿಸಿಕೊಂಡಿರುವು ಅಂಕಿತದ ಸಾಧನೆಗಳಲ್ಲಿ ಕೆಲವು.
ಪುಸ್ತಕ ವಿನ್ಯಾಸಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಐದು ಬಾರಿ ಪ್ರಶಸ್ತಿ, ಪ್ರಕಾಶನ ಕಾರ್ಯಕ್ಕಾಗಿ ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುರಸ್ಕಾರ, ಉತ್ತಮ ಕೃತಿಗಳ ಪ್ರಕಟಣೆಗಾಗಿ ಮಾಸ್ತಿ ಪ್ರಶಸ್ತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಪುರಸ್ಕಾರ ಇವು ಅಂಕಿತದ ಗರಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ 2010ರಿಂದ ಪ್ರಾರಂಭವಾಗಿರುವ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ ಪುರಸ್ಕಾರ ಅಂಕಿತ ಪುಸ್ತಕದ ಉದ್ಯಮ ಕಾಳಜಿಯ ದ್ಯೋತಕ.
©2024 Book Brahma Private Limited.