About the Author

ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಅವರು ಜನಿಸಿದ್ದು  1947ರ ಏಪ್ರಿಲ್ 3ರಂದು. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದ ಶ್ರೀಕೃಷ್ಣ ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಇವರು ಪ್ರಮುಖರು. ಕೆಲವು ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಶ್ರೀಕೃಷ್ಣ ಅವರು ನಗರೀಕರಣ ಮತ್ತು ಆಧುನಿಕ ಆರ್ಥಿಕತೆಯ ಸ್ಪರ್ಶಕ್ಕೆ ಸಿಕ್ಕ ಗ್ರಾಮೀಣ ಬದುಕಿನ ಪಲ್ಲಟಗಳನ್ನು ಅತ್ಯಂತ ಸಹಜ ರೀತಿಯಲ್ಲಿ ತಮ್ಮ ಕಥೆ-ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಶ್ರೀಕೃಷ್ಣ ಅವರ ಕೃತಿಗಳು: ಮಣ್ಣಿನ ಹಾಡು, ಕಾಡುಗಿಡದ ಹಾಡು-ಪಾಡು, ಪ್ರಕಟಿಸಲಾಗದ ಪದ್ಯಗಳು, ಡೋಗ್ರಾ ಪಹಾಡಿ ಗೀತೆಗಳು (ಕವನ ಸಂಕಲನಗಳು). ತಪ್ತ, ಫೀನಿಕ್ಸ್ (ಕಥಾ ಸಂಕಲನಗಳು), ಕಾಡು, ಪರಸಂಗದು ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರ, ಗೋಡೆ (ಕಾದಂಬರಿಗಳು), ಮೊದಲ ಮೂರು ಕಾದಂಬರಿಗಳು ವಿವಿಧ ನಿರ್ದೇಶಕರಿಂದ ಚಲನಚಿತ್ರಗಳಾಗಿದ್ದು, 'ಕಾಡು' ಚಿತ್ರ ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಅವಲೋಕನ, ಗ್ರಾಮಾಯಣ ಸಮೀಕ್ಷೆ ಅವರು ಸಂಪಾದಿಸಿದ ಕೃತಿಗಳು.

‘ಡೋಗ್ರಿ ಪಹಾಡಿ ಪ್ರೇಮಗೀತೆಗಳು’ ಎಂಬ ಸಂಕಲನದಲ್ಲಿ ಜಮ್ಮು-ಕಾಶ್ಮೀರಿ ಭಾಷೆಯಾದ ಡೋಗ್ರಿ-ಪಹಾಡಿ ಭಾಷೆಯಿಂದ ಡಾ. ಕರಣಸಿಂಗ್‌ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದನ್ನು ಆಲನಹಳ್ಳಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಅವರ ‘ಮಣ್ಣಿನ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನ ಸಂದಿದೆ. 

1989ರ ಜನವರಿ 4ರಂದು ಕೃಷ್ಣ ನಿಧನರಾದರು.

ಶ್ರೀಕೃಷ್ಣ ಆಲನಹಳ್ಳಿ

(03 Apr 1947-04 Jan 1989)