About the Author

ರಾಳ್ಳಪಲ್ಲಿ ವೆಂಕಟ ಸುಬ್ಬು ಸುಂದರಂ ಅವರನ್ನು ’ಆರ್ವಿಯಸ್ ಸುಂದರಂ’ ಎಂದು ಗುರುತಿಸಲಾಗುತ್ತದೆ. ಕವಿ, ವಿದ್ವಾಂಸ, ವಿಮರ್ಶಕ, ಜಾನಪದ ತಜ್ಞ, ಕಾದಂಬರಿಕಾರ, ಅನುವಾದಕರಾಗಿ ಚಿರಪರಿಚಿತರು.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಆರ್ವಿಯಸ್ ಸುಂದರಂ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅಧ್ಯಯನ ಕೇಂದ್ರ ಹಾಗೂ ಮೈ.ವಿ.ವಿ. ಪ್ರಸಾರಾಂಗದ ನಿರ್ದೇಶಕರೂ ಆಗಿದ್ದ ಸುಂದರಂ ಅವರು ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನವರು. 1948ರ ಏಪ್ರಿಲ್ 21ರಂದು ಜನಿಸಿದ ಅವರು ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣವನ್ನು ನೆಲ್ಲೂರಿನಲ್ಲಿ ಪಡೆದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1967) ಪದವಿ ಪಡೆದ ಅವರು ಅದೇ ವಿ.ವಿ.ಯಿಂದ ತೆಲುಗುನಲ್ಲಿ ಸ್ನಾತಕೋತ್ತರ (ಎಂ.ಎ.) (1969) ಪದವಿ ಪಡೆದರು. ಕರ್ನಾಟಕ ವಿ.ವಿ.ಯಿಂದ ಕನ್ನಡ ಎಂ.ಎ (1974), ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ.ಎ. (1986) ಪದವಿ ಗಳಿಸಿದರು.
ಮೈಸೂರು ವಿ.ವಿ.ಯಿಂದ ಪಿಎಚ್.ಡಿ. ಪದವಿ ಪಡೆದ ಅವರು 39 ವರ್ಷಗಳ ಕಾಲ ಅಧ್ಯಾಪಕ-ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತೆಲುಗು, ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ತಮಿಳು ಭಾಷೆಯಲ್ಲಿ ಪರಿಣಿತರಿರುವ ಸುಂದರಂ ಅವರು ಕವಿರಾಜಮಾರ್ಗವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾರೆ.
80ಕ್ಕೂಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಅವರಿಗೆ ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ, ಪಾಲ್ಕುರಿಕೆ ಸೋಮನಾಥ ಪ್ರಶಸ್ತಿ, ಭಾಷಾ ಭಾರತಿ ಪ್ರಶಸ್ತಿಗಳು ಸಂದಿವೆ.

ಆರ್‍ವಿಯಸ್ ಸುಂದರಂ

(21 Apr 1948)