About the Author

ಜಾನಪದ ತಜ್ಞರಾಗಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ಉತ್ತರ ಕರ್ನಾಟಕದ ಬಯಲಾಟಕ್ಕೆ ವಿಶಿಷ್ಟ ಸ್ಪರ್ಶ ನೀಡಿದವರು. ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಮಲಶೆಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿಯವರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.

ಬಸವರಾಜ ಮಲಶೆಟ್ಟಿಯವರು ಜನಿಸಿದ್ದ 1949ರ ಆಗಸ್ಟ್‌ 10ರಂದು ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಬಾಲ್ಯದ ದಿನಗಳಲ್ಲಿಯೇ ರಂಗಭೂಮಿಯ ಒಡನಾಟ ಆರಂಭವಾಯಿತು. ತಂದೆಯ ಜೊತೆಯಲ್ಲಿ ಆಟಕ್ಕೆ ಹೋಗುತ್ತಿದ್ದ ಬಸವರಾಜ ಅವರು ಬಯಲಾಟದಲ್ಲಿ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ. ಎ. ಪದವಿ ಪಡೆದ ಅವರು ನಂತರ ’ಉತ್ತರ ಕರ್ನಾಟಕದ ಬಯಲಾಟಗಳು’  ವಿಷಯದಲ್ಲಿ ಪಿಎಚ್‌.ಡಿ. ಪಡೆದರು.

  ವೃತ್ತಿರಂಗಭೂಮಿ, ಬಯಲಾಟ, ಹವ್ಯಾಸಿ ನಾಟಕ ರಂಗಭೂಮಿಗಳಿಗೆ ತಂದ ಸಾಮರಸ್ಯ. ರಂಗಭೂಮಿಯ ನಟರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳ ಪ್ರದರ್ಶನ. ಗಿರಿಜಾಕಲ್ಯಾಣ ದೊಡ್ಡಾಟವನ್ನು ಪರಿಷ್ಕರಿಸಿ ದೇಶ ವಿದೇಶಗಳಲ್ಲಿ ಅದರ ಪ್ರದರ್ಶನ ಏರ್ಪಡಿಸಲು ಕಾರಣರಾದರು.  ದಿಲ್ಲಿ, ಮುಂಬಯಿ, ಬೆಂಗಳೂರು ಮುಂತಾದ ನಗರಗಳಲ್ಲಿ, ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಹೊಸಪೇಟೆಯಲ್ಲಿ ರಂಗಭೂಮಿ ಚಟುವಟಿಕೆಯ ಜೀವಂತವಾಗಿ ಇರಿಸಿದ್ದರು. ಕರ್ನಾಟಕ ನಾಟಕ ಅಕಾಡಮಿ, ಜಾನಪದ ಪರಿಷತ್‌, ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ – ನಾಗಪುರ, ಉಡುಪಿಯ ರಂಗ ಕಲೆಗಳ ಅಧ್ಯಯನ ಕೇಂದ್ರಗಳ ಸದಸ್ಯರಾಗಿದ್ದರು. ಉತ್ತರ ಕರ್ನಾಟಕದ ರಂಗಗೀತೆಗಳು, ಜನಪದ ವಾದ್ಯಗಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಜಾನಪದ ಅಕಾಡಮಿ ಜಾನಪದ ತಜ್ಞ ಪ್ರಶಸ್ತಿ, ಜಾನಪದ ಪರಿಷತ್ತಿನ ವಿಶೇಷ ಪುರಸ್ಕಾರ, ಕಾವ್ಯಾನಂದ ಪ್ರಶಸ್ತಿ ದೊರೆತಿದ್ದವು.

2014ರ ಜೂನ್‌ 29ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬಸವರಾಜ ಮಲಶೆಟ್ಟಿ

(10 Aug 1949-29 Jun 2014)