About the Author

ಮುಂಬಯಿಯ ಸಾಂಸ್ಕೃತಿಕ ರಾಯಭಾರಿ, ಪ್ರತಿಭಾಶಾಲಿ ರಂಗ ನಿರ್ದೇಶಕ, ಚಿಂತಕ ಡಾ.ಭರತ್‌ಕುಮಾರ್ ಪೊಲಿಪು. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಅವರು ಕಳೆದ ಮೂರು ದಶಕಗಳಿಂದ ಮುಂಬೈ ಕನ್ನಡ ರಂಗಭೂಮಿಗೆ ಹೊಸನೀರು ಹರಿಸಿದವರಲ್ಲಿ ಮುಖ್ಯರು. ತಮ್ಮ ಪಿಎಚ್.ಡಿ. ಗಾಗಿ ಅವರು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ 'ಮುಂಬೈ ಕನ್ನಡ ರಂಗಭೂಮಿ ಒಂದು ತೌಲನಿಕ ಅಧ್ಯಯನ' ಗ್ರಂಥರೂಪದಲ್ಲಿ ಪ್ರಕಟವಾಗಿ ರಂಗಭೂಮಿಯ ಬಹುಮುಖ್ಯ ಆಕರಗ್ರಂಥಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ನಾಡಿಗೆ ನಮಸ್ಕಾರ ಮಾಲೆಗಾಗಿ 'ಡಾ. ವಿಶ್ವನಾಥ ಕಾರ್ನಾಡ್' ಕೃತಿ ರಚಿಸಿದ್ದಾರೆ.

ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿರುವ ಭರತಕುಮಾರ ಪೊಲಿಪು ಅವರು ವೃತ್ತಿಯಿಂದ ಬ್ಯಾಂಕ್ ಅಧಿಕಾರಿ, ರಂಗಭೂಮಿ ಅವರ ಪ್ರವೃತ್ತಿ. ಒಳ್ಳೆಯ ಚಿಂತಕ, ಲೇಖಕ ಹಾಗೂ ಸಂಘಟಕರಾಗಿ ಜನಮನ್ನಣೆಗೆ ಪಾತ್ರರಾಗಿರುವ ಅವರು ಉಡುಪಿ ಜಿಲ್ಲೆಯ ಪೊಲಿಪುವಿನವರು. ಕಾಲೇಜು ದಿನಗಳಲ್ಲಿಯೇ ರಂಗಾಸಕ್ತಿ ಬೆಳೆಸಿ ಕೊಂಡಿದ್ದರು. ಖ್ಯಾತ ನಿರ್ದೇಶಕರಾದ ಬಿ.ಆರ್.ನಾಗೇಶ್ ಮತ್ತು ಉದ್ಯಾವರ ಮಾಧವಾಚಾರ್ಯ ಅವರ ಗರಡಿಯಲ್ಲಿ ಪಳಗಿದ ಅವರು ಮುಂಬೈ ಕನ್ನಡ ರಂಗಭೂಮಿಗೆ ಹೊಸತನವನ್ನು ತಂದಿತ್ತಿವರು. ಪೊಲಿಪು ಅವರು 'ರಾವಿ ನದಿ ದಂಡೆಯಲ್ಲಿ', 'ಅಷಾಢದ ಒಂದು ದಿನ', 'ಪೊಲೀಸರಿದ್ದಾರೆ ಎಚ್ಚರಿಕೆ', 'ಟಿ. ಪ್ರಸನ್ನನ ಗೃಹಸ್ಥಾಶ್ರಮ', 'ಕೋಮಲ ಗಾಂಧಾರ' ಮೊದಲಾದ ನಾಟಕಗಳನ್ನು ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮೊದಲಾದ ಕಡೆ ಆಡಿಸಿದ್ದಾರೆ. ಅವರ ತುಳು ನಾಟಕ ’ಅರುಂಧತಿ'ಗೆ ರತ್ನವರ್ಮ ಹೆಗಡೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ನಾಟಕ ಅಕಾಡೆಮಿಯ 'ಮಾಸ್ಟರ್ ಕೆ. ಹಿರಣ್ಣಯ್ಯ ದತ್ತಿ ನಿಧಿ' ಪುರಸ್ಕಾರ, ಕಾಂತಾವರ ಕನ್ನಡ ಸಂಘದ ಸುವರ್ಣ ರಂಗ ಸನ್ಮಾನ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಭರತಕುಮಾರ ಪೊಲಿಪು