About the Author

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಡಿ.ಎ. ಶಂಕರ ಅವರು ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಎಮರಿಟಸ್ ಪ್ರೊಫೆಸರ್ ಆದವರು. ಕಾವ್ಯ, ಅನುವಾದ, ವಿಮರ್ಶೆ ಹಾಗೂ ನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಶಂಕರ್ ಅವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇಂಗ್ಲೆಂಡ್‌ನ ಫೀಲ್ಡ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಫೆಲೋ ಆಗಿದ್ದರು. ಹಾಗೆಯೇ, ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಫೆಲೋಶಿಪ್‌ನಲ್ಲಿ ಕಾರ್ಯನಿರ್ವಹಿಸಿದ್ದವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ  ಅವರ ಕವನ ಸಂಕಲನಗಳು. ನಿರ್ವಹಣೆ, ವಸ್ತುವಿನ್ಯಾಸ, ಅನುಕ್ರಮ ಅವರ ವಿಮರ್ಶಾ ಸಂಕಲನಗಳು.

 ಶಿವಗಣಪ್ರಸಾದಿ ಮಹಾದೇವಯ್ಯಗಳ ಶೂನ್ಯಸಂಪಾದನೆಯನ್ನು ಇಂಗ್ಲಿಷಿಗೆ ಅನುವಾದಿಸಿರುವ ಅವರು ತೇಜಸ್ವಿಯವರ ಕರ್ವಾಲೋ, ಪು.ತಿ.ನ. ಅವರ ಆಯ್ದ ಕವನಗಳನ್ನು Krishna's Flute and other poems ಎನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ. ಅನಂತಮೂರ್ತಿ, ವೈದೇಹಿ, ತೇಜಸ್ವಿ ಮತ್ತಿತರರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅವರ ’ಕೂಲಿ’ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ ಹಾಗೂ ಕನಕದಾಸರ ಆಯ್ದ ಕೃತಿಗಳ ಅನುವಾದ Golden Flockಗೆ ಅನುವಾದ ಅಕಾಡಮಿ ಪುಸ್ತಕ ಬಹುಮಾನ ಸಂದಿವೆ..

ಕರೀಭಂಟ ಮತ್ತು ಇತರ ಎರಡು ನಾಟಕಗಳು, ಮುದ್ದುರಾಜರುಗಳ ಪ್ರಸಂಗ ಎಂಬ ಪ್ರಹಸನವು ಇವರ ನಾಟಕಗಳು, ಅಮೃತಾ ಕಾದಂಬರಿ.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿರುವ ಕಾಮುವಿನ ಅನ್ಯ , ಮುಲ್‌ರಾಜ್ ಆನಂದ್‌ರ ಅಸ್ಪೃಶ್ಯ, ಕೂಲಿ, ವಾಲ್ವೇರ್‌ನ ’ಕ್ಯಾಂಡೀಡ್’, ವಿದ್ಯಾಪತಿಯ ಕಥೆಗಳು, ಜೈನ ಕಥಾಕೋಶ ಅವರಿಗೆ ಮನ್ನಣೆ ದೊರಕಿಸಿವೆ. ಚದುರಂಗ-ವ್ಯಕ್ತಿ-ಅಭಿವ್ಯಕ್ತಿ ಥಿಯರಿ ಇನ್ ಪ್ರಾಕ್ಟಿಸ್: ಸಿ.ಡಿ.ಎನ್. ಕುರಿತ ಲೇಖನಗಳು, ವ್ಯಾಸರಾವ್ ರೊದ್ದ ಅವರ ಚಂದ್ರಮುಖಿಯ ಘಾತವು (The fall of Chandramukhi) ಸಂಪಾದಿತ ಕೃತಿಗಳು. ಇಂಗ್ಲಿಷ್‌ನಲ್ಲಿ Shakespeare in Indian Languages, Appropriating Shakespeare, Cleanth Brooks: An Assessment, Readings and Re-readingsಗಳನ್ನು ಬರೆದಿದ್ದಾರೆ.

 

ಡಿ.ಎ. ಶಂಕರ್