About the Author

ಹರ್ಡೇಕರ್ ಮಂಜಪ್ಪ ಅವರು (ಜನನ: 18-02-1886) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಜನಿಸಿದರು. ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲೆ ಶಿಕ್ಷಕರಾದರು. ನಂತರ 1905ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು.

ಮಂಜಪ್ಪನವರು ಕೆಲಸಕ್ಕೆ ರಾಜೀನಾಮೆ ನೀಡಿ ಅಣ್ಣ  ಜೊತೆ ದಾವಣಗೆರೆಯಲ್ಲಿ ‘ಧನುರ್ಧಾರಿ’ ಪತ್ರಿಕೆ ಆರಂಭಿಸಿದರು. ಲೋಕಮಾನ್ಯ ಟಿಳಕರು ಕೇಸರಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದರು. ಇದನ್ನು ಇಷ್ಟಪಡದ ಮುದ್ರಕರು ನಿರಾಕರಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿಯೂ ಮತ್ತೆ ಪತ್ರಿಕೆ ಕಾರಣಾಂತರದಿಂದ ಸ್ಥಗಿತಗೊಂಡಿತ್ತು.

ರಾಷ್ಟ್ರೀಯತಾವಾದಿಯ ಪ್ರಭಾವದಿಂದ ಬ್ರಹ್ಮಚರ್ಯ ಘೋಷಿಸಿಕೊಂಡು 1911ರಲ್ಲಿ ಟಿಳಕರನ್ನು ಭೇಟಿಯಾದರು. ಹರಿಹರ ರೈಲ್ವೆ ನಿಲ್ದಾಣ ಬಳಿಯ ತಮ್ಮ ಗೆಳೆಯರ ಜಮೀನು ಪಡೆದು ‘ಸತ್ಯಾಗ್ರಹ ಆಶ್ರಮ’ ಸ್ಥಾಪಿಸಿದರು. 1924ರಲ್ಲಿ ಸಾಬರಮತಿಯ ಆಶ್ರಮಕ್ಕೆ ಭೇಟಿ ನೀಡಿದರು. 

1925ರಲ್ಲಿ ತಾಯಿ ತೀರಿಕೊಂಡ ಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ, ಗ್ರಾಮೋದ್ಧಾರದ ಕಾರ್ಯಕ್ರಮ ಕೈಗೊಂಡರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. 1927 ರಲ್ಲಿ ಆಲಮಟ್ಟಿಯಲ್ಲಿ ವಿದ್ಯಾಲಯ ಸ್ಥಾಪಿಸಿದರು. ಇಲ್ಲಿ ಜೀವನ ಶಿಕ್ಷಣ ಹೆಸರಿನಲ್ಲಿ ಕೈಕಸಬುಗಳನ್ನೂ ಕಲಿಸಲಾಗುತ್ತಿತ್ತು. 1930 ರಲ್ಲಿ “ಉದ್ಯೋಗ” ಮಾಸಪತ್ರಿಕೆ ಹಾಗೂ ಮಕ್ಕಳ ಸಾಹಿತ್ಯಮಾಲೆ ಆರಂಭಿಸಿದರು. ನಂತರ ಶರಣಸಂದೇಶ  ಮಾಸಪತ್ರಿಕೆ ಹೊರಡಿಸಿದರು. 1934ರಲ್ಲಿ ಗಾಂಧೀಜಿ ಅವರು ಕರ್ನಾಟಕಕ್ಕೆ ಬಂದಾಗ ಅವರೊಂದಿಗೆ ಸುತ್ತಿದರು. 1946ರಲ್ಲಿ ಪ್ರತಿಭಾ ಗ್ರಂಥಮಾಲೆ ಸ್ಥಾಪಿಸಿದರು. 

ಕೃತಿಗಳು: ಸ್ವಕರ್ತವ್ಯ ಸಿದ್ಧಾಂತ, ಬುದ್ಧಿಯ ಮಾತು, ವಾರದ ಮಲ್ಲಪ್ಪನವರ , ಚರಿತ್ರೆ, ಸ್ತ್ರೀನೀತಿ ಸಂಗ್ರಹ, ಆರೋಗ್ಯ ಜೀವನ, ಬುದ್ಧ ಚರಿತ್ರೆ, ಗಾಂಧೀ ಚರಿತ್ರೆ, ರಾಮತೀರ್ಥರ ಉಪನ್ಯಾಸ, ಭಾರತೀಯರ ದೇಶಭಕ್ತಿ, ಬಸವ ಚರಿತ್ರೆ, ಆಧುನಿಕ ಜರ್ಮನಿ, ವೀರಶೈವ ಸಮಾಜ ಸುಧಾರಣೆ, ಕೇರ ಹಾರ್ಡಿ, ಖಾದಿ, ಬ್ರಹ್ಮಚರ್ಯ, ಅಹಿಂಸೆ, ಸತ್ಯಾಗ್ರಹ ಧರ್ಮ, ಬಸವ ಬೋಧಾಮೃತ, ಸುಬೋಧಸಾರ, ಎಚ್ಚತ್ತ ಹಿಂದುಸ್ಥಾನ, "ಕಳೆದ ನನ್ನ30 ವರ್ಷಗಳ ಕಾಣಿಕೆ" 1936 ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆ ಮತ್ತು ಕನ್ನಡದ ಮೊದಲ ಆತ್ಮಚರಿತ್ರೆ ಯಾಗಿ ದಾಖಲೆಯಾಗಿದೆ. 1947 ಜನೆವರಿ 3 ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು.

ಹರ್ಡೇಕರ್ ಮಂಜಪ್ಪ

(18 Feb 1886-03 Jan 1947)