About the Author

ಡಾ. ಹರಿಕೃಷ್ಣ ಭರಣ್ಯರು (ಜನನ 1951) ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಸದ್ಯ ಕುಂಬಳೆಯ ನಾರಾಯಣ ಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹುಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯ ಭರಣ್ಯ. ಹವಿಗನ್ನಡ ಮಾತೃಭಾಷೆಯ ಭರಣ್ಯರು ಕನ್ನಡವಲ್ಲದೆ ಇಂಗ್ಲಿಷ್, ತಮಿಳು, ತುಳು, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಬಲ್ಲರು. ಸಂಶೋಧನೆ - ಪ್ರವೇಶ, ಸಂಶೋಧನ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಹವ್ಯಕಾಧ್ಯಯನ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಇತ್ಯಾದಿ ಅವರ ಕೃತಿಗಳು. ಭರಣ್ಯರು 'ಮೂಡು ಮಜಲು' ಮತ್ತು 'ಪ್ರತಿಸ್ವರ್ಗ' ಕಾದಂಬರಿಗಳ ಸಹಿತ ಹಲವಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಹವಿಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭರಣ್ಯರದು ಬಹಳ ಮುಖ್ಯವಾದ ಹೆಸರು. 'ದೊಡ್ಡಜಾಲು' ಎಂಬ ಹವಿಗನ್ನಡದ ಪ್ರಥಮ ಕಾದಂಬರಿ ಸಹಿತ ನಾಟಕಗಳು, ಕವಿತೆಗಳು, ಲಲಿತ ಪ್ರಬಂಧಗಳು ಇತ್ಯಾದಿ ಸಮೃದ್ಧ ಸಾಹಿತ್ಯವನ್ನು ಈ ಭಾಷೆಯಲ್ಲಿ ಸೃಷ್ಟಿಸಿದ್ದಾರೆ. 'ಹವಿಗನ್ನಡ' ಸೂರಿ ಪ್ರಶಸ್ತಿ ಪುರಸ್ಕೃತರಾದ ಭರಣ್ಯರು ಹವಿಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ತುಳು ಭಾಷೆಯಲ್ಲಿಯೂ 'ನಾಲನೇ ಬುಲೆ' ಎಂಬ ಕಾದಂಬರಿಯನ್ನು ರಚಿಸಿದ್ದಾರೆ.

ಹರಿಕೃಷ್ಣ ಭರಣ್ಯ