About the Author

ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ 14, 1946ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ಉದ್ಯೋಗದ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪರೀಕ್ಷೆಯಲ್ಲಿ ಐದು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದು ಉತ್ತೀರ್ಣರಾದ ಹೆಗ್ಗಳಿಕೆ ಅವರದು.

ಈಶ್ವರಚಂದ್ರರ ಹಲವಾರು ಸಣ್ಣಕಥೆ, ಪ್ರಬಂಧ, ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕಥಾಸಂಕಲನಗಳಲ್ಲಿ ರಾತ್ರಿರಾಣಿ, ತೀರ, ಗುಂಪಿನಲ್ಲಿ ಕಂಡ ಮುಖ, ಮುನಿತಾಯಿ, ಕತ್ತಲಗರ್ಭ ಮುಂತಾದವು ಸೇರಿವೆ. ಒಂದೇ ಸೂರಿನ ಕೆಳಗೆ, ಸಿಮೆಂಟ್ ಮನುಷ್ಯರು ಈಶ್ವರ ಚಂದ್ರರ ಕಾದಂಬರಿಗಳು. ಮಕ್ಕಳ ಸಾಹಿತ್ಯದಲ್ಲೂ ಗಣನೀಯ ಕಾಯಕ ಮಾಡಿರುವ ಈಶ್ವರ ಚಂದ್ರರು ಮಕ್ಕಳ ನರೇಂದ್ರ ವಿವೇಕಾನಂದ, ಭಗತ್‌ಸಿಂಗ್, ಮಾರ್ಕೊನಿ, ಜಾರ್ಜ್ ಸೈಮನ್ ಓಂ, ಅ.ನ.ಕೃಷ್ಣರಾವ್, ಸುಬೋಧ ರಾಮರಾವ್, ಕಲ್ಯಾಣಸ್ವಾಮಿ, ಬೆಂಗಳೂರು ಜಿಲ್ಲೆಯ ದರ್ಶನ, ಗೆಳೆತನ, ಬೆಂಗಳೂರು ನಗರ ದರ್ಶನ, ಕೆಂಪೇಗೌಡ ನಗರ ದರ್ಶನ, ಚೈತ್ರಪಲ್ಲವ, ಸುವರ್ಣಶಕ್ತಿ, ಎಚ್.ಎ.ಇ.ಎ. ಹೆಜ್ಜೆ ಗುರುತುಗಳು, ನಕಾಶೆ ಕಲೆ, ವೆಲ್ಡಿಂಗ್ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಎಕ್ಕೋರಿಯ ಕನಸು, ನಮ್ಮ ಭೂ ಸೇನೆ, ಬ್ರಹ್ಮಾಂಡದ ಬಳುವಳಿ, ಕಿವುಡು ವನದೇವತೆ, ಅಕ್ಬರನಿಂದ ಔರಂಗಜೇಬ್‌ವರೆಗೆ, ಭೂಕಂಪ, ನಾಳೆ ಸಂಭವಿಸಿದ್ದು ಮೊದಲಾದವು ಅವರ ಅನುವಾದ ಕೃತಿಗಳು. ಈಶ್ವರಚಂದ್ರರು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞೆ ಸಂಘ - ಇಸ್ಕಾನ್ ಅವರಿಗಾಗಿ 1300 ಪುಟಗಳ ಶ್ರೀಮದ್ ಭಾಗವತವನ್ನು ರಚಿಸಿರುವುದಲ್ಲದೆ, 1400 ಪುಟಗಳ ಶ್ರೀ ಚೈತನ್ಯ ಚರಿತಾಮೃತವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಈಶ್ವರ ಚಂದ್ರರ ಕೃತಿಗಳು ಇತರ ಹಲವಾರು ಭಾಷೆಗಳಿಗೆ ತರ್ಜುಮೆ ಗೊಂಡಿವೆ. ಅವರ ಭಗತ್‌ಸಿಂಗ್ ಕೃತಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ; 'ಒಂದೇ ಸೂರಿನ ಕೆಳಗೆ' ಕೃತಿ 'ಒಕೇ ಗೂಟಲೋ' ಎಂಬ ಹೆಸರಿನಿಂದ ತೆಲುಗಿಗೆ; ಸಿಮೆಂಟ್ ಮನುಷ್ಯರು ಕೃತಿ 'ಸಿಮೆಂಟ್ ಮನಿದರ್ಗಳ್' ಎಂದು ತಮಿಳಿಗೆ; ಮುನಿತಾಯಿ ಕೃತಿ ‘ಮುನಿತಾಯಿ ವ ಇತರ ಕಥಾ’ ಎಂದು ಮರಾಠಿಗೆ ಅನುವಾದಗೊಂಡಿವೆ. ಇದಲ್ಲದೆ ಇವರ ಅನೇಕ ಬಿಡಿ ಕಥೆಗಳೂ ಸಹಾ ತೆಲುಗು, ತಮಿಳು, ಮರಾಠಿ, ಉರ್ದು, ಮಲೆಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ತೀರ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಕ್ಕಳ ನರೇಂದ್ರ ವಿವೇಕಾನಂದ ಕೃತಿಗೆ ಸಾಹಿತ್ಯ ಸ್ಪರ್ಧೆ ವಿಶೇಷ ಪ್ರಶಸ್ತಿ, ಮುನಿತಾಯಿ ಕಥಾಸಂಕಲನಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಹಲವಾರಿ ಗೌರವ, ಪ್ರಶಸ್ತಿಗಳು ಸಂದಿವೆ.

ಈಶ್ವರಚಂದ್ರ

(14 Jul 1946)