About the Author

ಭಾಷಾಂತರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಲೇಖಕ ಕೆ. ಕೆ. ನಾಯರ್. ಕೆ. ಕೆ. ನಾಯರ್ ಅವರು ಜನಿಸಿದ್ದು ಉತ್ತರ ಕೇರಳದ ಪುಟ್ಟ ಗ್ರಾಮ ಅರತ್ತಿಲ್‌ನಲ್ಲಿ. ಬಡತನದ ಕಾರಣದಿಂದ ಬಾಲ್ಯದಲ್ಲಿಯೇ ಮಣಿಪಾಲಕ್ಕೆ ವಲಸೆ ಬಂದರು. 

ಮಲಯಾಳಂನಿಂದ ಕನ್ನಡಕ್ಕೆ 16 ಕಾದಂಬರಿ, 7 ಕಾವ್ಯ, 5 ಸಣ್ಣ ಕಥೆಗಳ ಸಂಗ್ರಹ ಅನುವಾದಿಸಿದ್ದಾರೆ. ಅವರು ’ಒಂದು ಆತ್ಮ ಕಥನ’ (ಕುಂಞಪ್ಪ) ಮಾತ್ರ ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಮಲಯಾಳಕ್ಕೆ ಐದು ಕಾದಂಬರಿ ಅನುವಾದಿಸಿರುವ ಅವರು ತಗಳಿ ಶಿವಶಂಕರ ಪಿಳ್ಳೈ ಅವರ ಮಲಯಾಳ ಕೃತಿ ‘ಕಯರ್ ’ಅನ್ನು ’ಹಗ್ಗ’ ಎಂದು ಭಾಷಾಂತರಿಸಿದ್ದರು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ (2012) ದೊರೆತಿದೆ. ಎಸ್. ಕೆ. ಪೊಟ್ಟೆಕಟ್ಟ್ ಅವರ ಮಲಯಾಳ ಕೃತಿ ’ಒರು ದೇಸತ್ತಿಂಡೆ ಕಥಾ’ಯನ್ನು ಒಂದು ಊರಿನ ಕಥೆ ಎಂದು ಅನುವಾದಿಸಿದ್ದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ(1997) ದೊರೆತಿದೆ. ಇವೆರಡೂ ಕೃತಿಗೆ ಡಾ. ಅಶೋಕ್ ಕುಮಾರ್ ಅನುವಾದದಲ್ಲಿ ಸಹಭಾಗಿಯಾಗಿದ್ದರು. 
28 ವರ್ಷಗಳ ಕಾಲ ಮಣಿಪಾಲ್ ಪವರ್ ಪ್ರೆಸ್‌ನಲ್ಲಿ ಸೇವೆ(ಮೊನೊಟೈಪ್ ಕ್ಯಾಸ್ಟರ್) ಕಾರ್ಯ ನಿರ್ವಹಿಸಿದ್ದ ಅವರು ಕನ್ನಡ ಮತ್ತು ಮಲಯಾಳ ಸಾಹಿತ್ಯ ರಚನೆ, ಮಲಯಾಳ ಕವಿತಾ ವಾಚನ, ಗಾರ್ಡನಿಂಗ್, ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. 
ಲಲಿತಾಂಬಿಕಾ ಅಂತರ್ಜನಮ್ ಅವರ ಮಲಯಾಳಿ ಕೃತಿ ’ಅಗ್ನಿ ಸಾಕ್ಷಿಯ’ನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅದಕ್ಕೆ ಕೇಂದ್ರದ ಭಾರತೀಯ ಭಾಷಾ ಸಂಸ್ಥಾನದ (1988) ಸಾಲಿನ ಪ್ರಶಸ್ತಿ ಪ್ರಾಪ್ತವಾಗಿತ್ತು. ಎಂ. ಕೆ. ಇಂದಿರಾ ಅವರ ಫಣಿಯಮ್ಮ, ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಮಲಯಾಳಕ್ಕೆ ಭಾಷಾಂತರಿಸಿದ್ದರು.
ಶಿವರಾಮ ಕಾರಂತರ ಸರಸಮ್ಮನ ಸಮಾಧಿ ಕೃತಿ, ಮಲಯಾಳದಲ್ಲಿ ’ಸರಸಮ್ಮಯುಡೆ ಸಮಾಧಿ’ ಎಂದು ಅನುವಾದಿಸಿದ್ದ ಅವರು  ಮಹಾಕವಿ ಕುಮಾರನ್ ಆಶನ್ ಅವರ ’ಚಿಂತಾವಿಷ್ಟಯಾಯ ಸೀತಾ’ ಮಲಯಾಳ ಕವಿತೆಯನ್ನು ಕನ್ನಡದಲ್ಲಿ ’ಚಿಂತಾಮಗ್ನ ಸೀತೆ’ ಎಂದು ಕನ್ನಡೀಕರಿಸಿದ್ದರು.
ಅವರ ಜೀವಮಾನದ ಸಾಧನೆಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ((2011-12) ಗೌರವ ಪ್ರಶಸ್ತಿ ನೀಡಿತ್ತು. ಹಂಪಿ ಕನ್ನಡ ವಿವಿಯ ಕನ್ನಡ ಶೈಲಿ ಕೈಪಿಡಿ ರಚನೆಗೆ ಸಂಬಂಧಿಸಿದ ಹಿರಿಯ ಸಲಹಾ ಸಮಿತಿ ಸದಸ್ಯರಾಗಿದ್ದ(1995) ಅವರು ಎಂ. ಟಿ. ವಾಸುದೇವನ್ ನಾಯರ್ ಅವರ ಸಣ್ಣ ಕಥೆಗಳ ಸಂಗ್ರಹ ’ಕುಟ್ಯತ್ತೆತ್ತಿಯುಂ ಮತ್ತು ಕಥಕಲುಂ’ ಕೃತಿಯನ್ನು ಕನ್ನಡಕ್ಕೆ ’ಕುಟ್ಯಕ್ಕ ಮತ್ತು ಇತರ ಕಥೆಗಳು’ ಎಂದು ಭಾಷಾಂತರ ಮಾಡಿದ್ದರು.

ಕೆ.ಕೆ. ನಾಯರ್