About the Author

ಲೇಖಕಿ ಶಾರದಾಭಟ್ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಕೋಟೇಶ್ವರದವರು. ತಂದೆ- ಕೆ. ವಿಠಲಭಟ್, ತಾಯಿ ಕಾವೇರಿಯಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ಪಡೆದ ಅವರು ದೂರಸಂಪರ್ಕ ಇಲಾಖೆಯಲ್ಲಿ ಕೆಲಸ ದೊರೆತಿದ್ದರಿಂದ ಉದ್ಯೋಗದ ಜೊತೆಗೆ ಬೆಂಗಳೂರಿನ ಆಚಾರ‍್ಯ ಪಾಠಶಾಲಾ ಸಂಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿಪಡೆದರು. ಜೊತೆಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವಿದ್ದ ಶಾರದ ಅವರು ಮಹಿಳೆಯರ ಶೋಷಣೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಮಹಿಳಾ ಸಂಘಟನೆಗಳೊಡನೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಶೋಷಣೆ ಕುರಿತು ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಉದ್ಯೋಗದ ಜೊತೆಗೆ ರೂಢಿಸಿಕೊಂಡ ಮತ್ತೊಂದು ಹವ್ಯಾಸ ಪತ್ರಿಕೋದ್ಯಮ. SOUTHERN SPEAKER ಆಂಗ್ಲ ಪತ್ರಿಕೆಯ ವರದಿಗಾರ್ತಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿರುವ ಅವರು ನಂತರ POLITICAL VIEW AND REVIEW ಎಂಬ ಆಂಗ್ಲ ಪತ್ರಿಕೆಯ ಗೌರವ ಸಹ ಸಂಪಾದಕಿಯಾಗಿ ಕಾರ‍್ಯನಿರ್ವಹಣೆ. ಇದೀಗ ಉಡುಪಿಯಲ್ಲಿ ಪತ್ರಕರ್ತೆಯಾಗಿ ಪ್ರಖ್ಯಾತ ಪತ್ರಿಕೆಗಳನ್ನೊಳಗೊಂಡಂತೆ ‘ವಾರ್ತಾಭಾರತಿ’ ದೈನಿಕದಲ್ಲಿ ‘ಉತ್ತರೆಯ ಅಳಲು’ ಎಂಬ ಅಂಕಣ ನಿರ್ವಹಣೆ ಮಾಡುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಕತೆ, ಕವನ, ವಿಡಂಬನಾ ಲೇಖನಗಳು ಪ್ರಕಟವಾಗಿವೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ವಧುದಹನ, ಅನಕ್ಷರತೆ ಮುಂತಾದುವುಗಳ ಬಗ್ಗೆ ಅರಿವು ಮೂಡಿಸಲು ‘ಅಭಿಯಾನ’ ಪ್ರತಿಷ್ಠಾನ ಸ್ಥಾಪಿಸಿ, ಪ್ರತಿಷ್ಠಾನದಿಂದ ಯೋಗ ಶಿಬಿರ, ಫಿಲ್ಮ್ ಸ್ಕ್ರಿಪ್ಟ್ ರೈಟಿಂಗ್, ಸಾಹಿತ್ಯ ಸಂಕಿರಣ ಮುಂತಾದ ಕಾರ‍್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅವರ ಕೃತಿಗಳು-  ಪಯಣ, ಪಲಾಯನ, ಪರಿಭ್ರಮಣ, ಪದರುಗಳು ಕಾದಂಬರಿಗಳು. ಸಾತತ್ತೆಗೊಂದು ಸನ್ಮಾನ, ಸೆಕ್ರೆಟರ ಸಾಹೇಬರ ಹೆಂಡತಿ ಮತ್ತು ಇತರ ಕಥೆಗಳು- ಕಥಾಸಂಕಲನ. ವಿಡಂಬನೆ-ವಾರ ನೋಟ. ಪಂಡಿತ ರಮಾಬಾಯಿ, ಸ್ವರಸಂವಾದ, ಹೆಜ್ಜೆ ಗುರುತು- ಜೀವನಚರಿತ್ರೆಗಳು.ಹಾಗೂ ಕೊಂಕಣಿ ಕಾದಂಬರಿ-ಅಸ್ತಮಾನ ಸೇರಿದಂತೆ ಒಟ್ಟು ಹದಿನೈದು ಕೃತಿಗಳು ಪ್ರಕಟವಾಗಿವೆ.

ಕೆ. ಶಾರದಾ ಭಟ್

(24 Oct 1949)