About the Author

ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಕೆ.ವೈ.ಎನ್ ಎಂದೇ ಚಿರಪರಿಚಿತರಾಗಿರುವ ಕೈ.ವೈ.ನಾರಾಯಣಸ್ವಾಮಿಯವರು ಮೂಲತಃ ಕೋಲಾರದವರು. ಕೋಲಾರ ಜಿಲ್ಲೆಯ ಮಾಸ್ತಿ ಬಳಿ ಇರುವ ಮಾಲೂರು ತಾಲೋಕಿನ ‘ಕುಪ್ಪೂರು’ ಕೆವೈಎನ್ ಅವರ ಹುಟ್ಟೂರು. ತಂದೆ-ಯಾಲಪ್ಪ ಮತ್ತು ತಾಯಿ- ಮುನಿಯಮ್ಮ. ಇವರ ಪೂರ್ಣ ಹೆಸರು ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’. ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಮುಗಿಸುತ್ತಾರೆ. ಇವರ ಪಿ.ಎಚ್.ಡಿ ಪ್ರಬಂಧವಾದ ‘ನೀರ ದೀವಿಗೆ’ ಈ ದೇಶದ ಸಂಸ್ಕೃತಿಯನ್ನು ‘ಅಗ್ನಿ’ ಮತ್ತು ‘ಜಲ’ದ ಮೂಲಕ ವ್ಯಾಖ್ಯಾನಿಸಿರುವುದು ಹೊಸ ಮೈಲುಗಲ್ಲಾಗಿದೆ. ಸದ್ಯ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

‘ಕಳವು’, ‘ಅನಭಿಜ್ಞ ಶಾಕುಂತಲ’, ‘ಚಕ್ರರತ್ನ’, ‘ಹುಲಿಸೀರೆ’, ಮತ್ತು ‘ವಿನುರ ವೇಮ’, ಇವರ ಕನ್ನಡದ ಪ್ರಸಿದ್ದ ನಾಟಕಗಳು. ಅಲ್ಲದೆ ‘ಕುವೆಂಪು’ರವರ ‘ಶೂದ್ರತಪಸ್ವಿ’ ನಾಟಕವನ್ನು ತೆಲುಗು ಭಾಷೆಗೆ ಭಾಷಾಂತರಿಸಿದ್ದು ಮತ್ತು ‘ಮಲೆಗಳಲ್ಲಿ ಮದುಮಗಳು’ ಬೃಹತ್ ಕಾದಂಬರಿಯನ್ನು ಒಂಬತ್ತು ಗಂಟೆಗಳ ‘ರಂಗ ರೂಪ’ಗೊಳಿಸಿದ್ದಾರೆ. ಇದು ಭಾರತಿಯ ರಂಗಭೂಮಿ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೆ ಸೃಷ್ಠಿಸಿದೆ. ‘ಕಳವು’ ಮತ್ತು ‘ಸೂರ್ಯಕಾಂತಿ’ ಎಂಬ ಕನ್ನಡ ಚಲನಚಿತ್ರಗಳಿಗೆ ಚಿತ್ರಕತೆ ಬರೆದಿದ್ದಾರೆ. ಕನ್ನಡ ಆಧುನಿಕ ರಂಗಭೂಮಿಯಲ್ಲಿ ಹೊಸ ಮೈಲು ಮೂಡಿಸಿದ ಇವರ ‘ಪಂಪ ಭಾರತ’ ನಾಟಕಕ್ಕೆ ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡದ ಪ್ರಭಾವಿ ಬರಹಗಾರು ಮತ್ತು ಚಿಂತಕರಾಗಿರುವ ಇವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಪ್ರಯೋಗಗಳೊಂದಿಗೆ ತನ್ನದೆಯಾದ ಹೊಸ ಗಡಿಗಳನ್ನು ಶೋಧಿಸುತ್ತಿವೆ. ಕೆ.ವೈ.ಎನ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆಗಾಗಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ (ಪಂಪ ಭಾರತ ನಾಟಕಕ್ಕೆ), ‘ಕರ್ನಾಟಕ ಇಂಟರ್ನ್ಯಾಷನಲ್ ಸಂಗೀತ ಪ್ರಶಸ್ತಿ’ 2013 ಮತ್ತು 2014 (ಅನಭಿಜ್ಞ ಶಾಕುಂತಲ ಮತ್ತು ಮಳೆ ಮಾಂತ್ರಿಕ ನಾಟಕಕ್ಕೆ), ‘ರಾಜ್ಯ ಪ್ರಶಸ್ತಿ’ 2014 ಅತ್ಯುತ್ತಮ ಚಿತ್ರಕಥೆ (ಕಳವು ಚಿತ್ರಕ್ಕೆ), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ನೆನೆವ ಪರಿ’ಕೃತಿಗೆ (ಪ್ರಕಟಿಸಿದ ವರ್ಷ 2010) ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 

ಕೆ.ವೈ. ನಾರಾಯಣಸ್ವಾಮಿ

(05 Jun 1965)