About the Author

ಪ್ರಸಿದ್ಧ ನಾಟಕಕಾರ ಕಂದಗಲ್ ಹನುಮಂತರಾಯರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬೀಳಗಿ ತಾಲೂಕಿನ ಕಂದಗಲ್ಲಿನಲ್ಲಿ. ತಂದೆ-ಭೀಮರಾಯರು, ತಾಯಿ-ಗಂಗೂಬಾಯಿ. ಕನ್ನಡದ ಶೇಕ್ಸ್ ಪಿಯರ್ ಎಂದೇ ಹೆಸರಾಗಿದ್ದ ಹನುಮಂತರಾಯರ ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ ಪೂರ್ಣಗೊಂಡರೆ ಮಾಧ್ಯಮಿಕ ಶಿಕ್ಷಣವನ್ನು ವಿಜಾಪುರದಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಊರಿನಲ್ಲಿ ನಡೆಯುತ್ತಿದ್ದ ಭಜನೆ, ಮೇಳ, ದೊಡ್ಡಾಟಗಳಿಂದ ಆಕರ್ಷಿತರಾದ ಅವರು ನಾಟಕದತ್ತ ಹೆಚ್ಚು ಆಸಕ್ತರಾದರು. ಗಣೇಶೋತ್ಸವಕ್ಕಾಗಿ ಚೌತಿಚಂದ್ರ, ಸುಕನ್ಯ, ಭಕ್ತಧ್ರುವ, ಸತ್ಯವಾನ ಸಾವಿತ್ರಿ, ಕೃಷ್ಣ ಸುಧಾಮ, ತರಲಿಟೊಪಿಗಿ ಮುಂತಾದ ಏಕಾಂಕ ನಾಟಕಗಳನ್ನು ರಚಿಸಿ ಪ್ರದರ್ಶನ ಏರ್ಪಡಿಸುತ್ತಿದ್ದರು. ಇದೆಲ್ಲದರ ಜೊತೆಗೆ ಕೆರೂರು ವಾಸುದೇವಾಚಾರ್ಯರ ಕೃತಿಗಳಿಂದ ಪ್ರೇರಿತರಾದ ಅವರು ತಾನೂ ನಾಟಕಕಾರರಾಗಬೇಕೆಂಬ ಆಸೆಯನ್ನು ಬೆಳೆಸಿಕೊಂಡರು. ಮೆಟ್ರಿಕ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಪುಣೆಗೆ ಪಯಣ ಬೆಳೆಸಿದರು ಅಲ್ಲಿ ನಾಟಕಗಳ ಕೇಂದ್ರದಲ್ಲಿ ಕೆಲಸಕ್ಕೆ ಸೇರಿದರು. ಮಿಲ್ಟ್ರಿ ಕಾರಕೂನನಾಗಿ ಸೇರಿದ ಅವರು ಹಲವಾರು ನಾಟಕಗಳನ್ನು ನೋಡುತ್ತಾ, ಹೆಸರಾಂತ ರಂಗ ಕರ್ಮಿಗಳಾದ ಗಡಕರಿ, ಗೋಖಲೆ, ದೇಶಪಾಂಡೆ ಮುಂತಾದವರ ಸಹವಾಸ, ಸಮಾಲೋಚನೆಗಳಲ್ಲಿ ಭಾಗಿಯಾದರು. ಆನಂತರದಲ್ಲಿ ತಾಯಿಯ ಅನಾರೋಗ್ಯದಿಂದ ಊರಿಗೆ ವಾಪಸ್ ಆದ ಅವರು ಮೊದಲು ಬರೆದದ್ದು ‘ಸಂಧ್ಯಾರಾಗ’- ಮೂರಂಕದ ನಾಟಕ. ಈ ನಾಟಕ ಹಲವಾರು ಪ್ರದರ್ಶನ ಕಂಡು ಯಶಸ್ವಿಯಾಯಿತು.
ತಮ್ಮ ಹವ್ಯಾಸದ ಜೊತೆಗೆ ಬಾಗಲಕೋಟೆಯಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಸೇರಿದರು ಇದರಿಂದಾಗಿ ಅವರ ರಂಗ ಚಟುವಟಿಕೆಗಳಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಯಿತು. ಅಲ್ಲದೆ ಗುಳೇದಗುಡ್ಡ, ಇಳಕಲ್ ಜನಕ್ಕೆ ನಾಟಕ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಇವರಿಗೆ ಬೆಂಬಲವಾಯಿತು. ವೀರರಾಣಿ ಕಿತ್ತೂರು ಚೆನ್ನಮ್ಮ ಸೇರಿದಂತೆ ಹಲವಾರು ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ರಕ್ತ ರಾತ್ರಿ, ಚಿತ್ರಾಂಗದ, ಬಾಣಸಿಗ ಭೀಮ, ಅಕ್ಷಯಾಂಬರ, ರಾಜಾ ಹರಿಶ್ಚಂದ್ರ, ಬಡತನದ ಭೂತ, ಮಾತಂಗ ಕನ್ಯೆ, ಕುರುಕ್ಷೇತ್ರ ಮುಂತಾದ ನಾಟಕಗಳಿಂದ ಜನರನ್ನು ರಂಜಿಸಿ ಖ್ಯಾತಿ ಗಳಿಸಿದರು. ಇವರ ರಂಗ ತಾಲೀಮಿನಲ್ಲಿ ತಯಾರಾದ ನಟರು ಹಾಗೂ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ, ಬಸವರಾಜಗುರು, ಸೋನುಬಾಯಿ ದೊಡ್ಡಮನಿ, ಏಣಗಿ ಬಾಳಪ್ಪ, ಸುಭದ್ರಮ್ಮ ಮನಸೂರ, ಗರೂಡ ಸದಾಶಿವರಾಯರು, ಜುಬೇದಬಾಯಿ ಸವಣೂರ, ಕೆ. ನಾಗರತ್ನ, ಅಂಬುಜಾ, ವಸಂತ ಕುಲಕರ್ಣಿ ಸೇರಿದಂತೆ ಹಲವಾರು ಪ್ರಸಿದ್ಧರ ಬಹುದೊಡ್ಡ ಶಿಷ್ಯವರ್ಗ ಹೊಂದಿದ್ದರು.

ಕಂದಗಲ್ಲ ಹನಮಂತರಾಯ

(11 Jan 1896-13 May 1966)