About the Author

ಎಂ.ಎ. ಜಯಚಂದ್ರ ಜೈನಸಾಹಿತ್ಯದ ಜಾನಪದ ವಿದ್ವಾಂಸರಾದ ಜಯಚಂದ್ರರವರು ಹುಟ್ಟಿದ್ದು ಮಂಡ್ಯದಲ್ಲಿ 1944 ಜನವರಿ 30 ರಂದು. ತಂದೆ ಎಂ.ಡಿ. ಆದಿರಾಜಯ್ಯ, ತಾಯಿ ಜಯಮ್ಮ. ಪ್ರಾರಂಭಿಕ ಶಿಕ್ಷಣ ಮಂಡ್ಯ. ಬೆಂಗಳೂರಿನ ವಿಜಯ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹಾಗೂ ‘ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು: ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ.ಪದವಿ.

ಬೋಧಕರಾಗಿ ಸೇರಿದ್ದು ಸರಕಾರಿ ಮಂಡ್ಯ ಕಾಲೇಜಿನಲ್ಲಿ. ಶಿಕಾರಿಪುರ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿಜಯಾ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ಮಂಡ್ಯದ ಸರಕಾರಿ ಮಹಿಳಾ ಕಾಲೇಜು ಮುಂತಾದೆಡೆಗಳಲ್ಲಿ ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಹಿರಿಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 

‘115 ಜಾನಪದ ಕಿರುಗತೆಗಳು’, ‘ಫೋಕ್‌-ಲೋಕ್‌-ಫೋಕ್‌ಲೋಕ್‌’, ‘ಸಂಸಾರಿ ಹೆಚ್ಚೋ ಸಂನ್ಯಾಸಿ ಹೆಚ್ಚೋ’ ‘ಪಡಸಾಲೆಯ ಪವಾಡಗಳು’, ‘ಜಾನಪದ ನೀಳ್ಗತೆಗಳು’, ‘ಬುದ್ಧಿವಂತಿಕೆಯ ಕಥೆಗಳು’ ಇವರ ಜಾನಪದ ಕೃತಿಗಳು. 

‘ಏಲಾಚಾರ್ಯ ಮುನಿಶ್ರೀ ವಿದ್ಯಾನಂದರು’, ‘ಆಚಾರ್ಯ ಶ್ರೀ ಕುಂದಕುಂದರು’, ‘ಆ.ನೇ. ಉಪಾಧ್ಯೆ’, ‘ಅತಿಮಬ್ಬೆ’, ‘ಭಗವಾನ್‌ ಮಹಾವೀರ’ ಜೀವನ ಚರಿತ್ರೆಗಳು; ಕವಿತೆ-ವಚನ ಕೃತಿಗಳು; ದಾರ್ಶನಿಕ ಕಥಾಸಂಗ್ರಹಗಳು; ಹಲವಾರು ಸಂಪಾದಿತ ಕೃತಿಗಳು, ಪ್ರಾಕೃತ ಸಾಹಿತ್ಯ ಕೃತಿಗಳು ಮುಂತಾದ 59ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. 

ಎಂ.ಎ. ಜಯಚಂದ್ರ

(30 Jan 1944)