About the Author

ಲೇಖಕ ಎಂ.ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ರಾಮಸ್ವಾಮಯ್ಯ. ತಾಯಿ- ಸೀತಮ್ಮ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದ ಅವರು ಎಂ.ಬಿ.ಬಿ.ಎಸ್ ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಸಂಸಾರದ ಜವಾಬ್ದಾರಿ ಹೊರಬೇಕಾಯ್ತು. ಈ ವೇಳೆ ಸಾಹಿತಿ ಕೈಲಾಸಂ ಅವರು ವೈದ್ಯರಾಗಿ ಸೇವೆಸಲ್ಲಿಸುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿಯೇ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದ ಶಿವರಾಂ ಅವರು ಕೈಗಾರಿಕೋದ್ಯಮದಲ್ಲೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಡನಾಟವಿದ್ದ ಅವರು ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ಕ್ಯಾನ್ಸರ್ ಸೊಸೈಟಿ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ರಾಜ್ಯ ಶಾಖೆಯ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೊರವಂಜಿ ಪತ್ರಿಕೆಗೆ ಕುಮಾರ್, ಬಚ್ಚ, ಪ್ರಸಾದ್ ಎಂಬ ವಿವಿಧ ಹೆಸರುಗಳಿಂದ ಲೇಖನಗಳನ್ನು ಬರೆಯುತ್ತಿದ್ದ ಅವರು ವಿದೇಶ ಪ್ರವಾಸ ಮಾಡಿ  ‘ಕೊರವಂಜಿಯ ಪಡುವಣ ಯಾತ್ರೆ ಎಂಬ ಪ್ರವಾಸ ಕಥನ ರಚಿಸಿದರು. ಹಾಸ್ಯಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ‘ತುಟಿ ಮೀರಿದುದು’, ‘ಜೇಬುಗಳ್ಳರ ಜಿಮ್ಮಿ’, ‘ಒಂದಾನೊಂದು ಕಾಲದಲ್ಲಿ’, ‘ಕೊರವಂಜಿ ಕಂಡ ನಗು ದರ್ಬಾರಿಗರು, ನಗು ಸಂಸಾರಗಳು, ನಗು ಸರಸಿ ಅಪ್ಸರೆಯರು, ಕೊರವಂಜಿ ಕಂಡ ನಗು ವ್ಯಕ್ತಿಗಳು, ಕೊರವಂಜಿ ಕಂಡ ನಗು ಸಮಾಜ, ನಗು, ನವ್ಯ ಅಡುಗೋಲಜ್ಜಿ ಕತೆಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದರು. ಜೊತೆಗೆ ಅಣಕು ಕವನಗಳು-ಕೆಣಕೋಣಬಾರ, ಹಾಸ್ಯಚಟಾಕಿ-ಥಳಕು-ಮಿಣಕು. ಕಾದಂಬರಿಗಳು-ಹರಿದ  ಉಯಿಲು, ಕಾರ್ತಿಕ ಸೋಮವಾರ, ಪಂಪಾಪತಿಯ ಕೃಪೆ, ಮಧುವನದಲ್ಲಿ ಮೇಳ, ಮೃಗಶಿರ, ಅಂಚೆ ಪೇದೆ ಅಂತರ್ ಹೆಂಡತಿ, ಪೋಂತಿಯೇನೋ ಹಾಗೂ ಕಥಾಸಂಕಲನಗಳು-ಜಗ್ಗೋಜಿಯ ಕಥೆಗಳು, ಬುದ್ದೋಜಿಯ ಕಥೆಗಳು, ಪಶ್ಯಾಮಿ ಕಥೆಗಳು. ಮನಃಶಾಸ್ತ್ರದ ಮೇಲೆ ರಚಿಸಿದ ಕೃತಿ-ಮನೋನಂದನ, ಮನಮಂಥನ ಇತ್ಯಾದಿ.  ಸಮಾಜ ಮತ್ತು ಸಾಹಿತ್ಯಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿಯ ಅಧ್ಯಕ್ಷರ ಜವಾಬ್ದಾರಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. 

ಎಂ. ಶಿವರಾಂ (ರಾಶಿ)

(10 Nov 1905-13 Jan 1984)

Books about Author

Awards