ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ಮಹಾದೇವ ಬಸರಕೋಡ ಅವರು ಬಾಗಲಕೋಟೆಯ ಜಿಲ್ಲೆಯ ಅಮೀನಗಡಕ್ಕೆ ಬಂದು ನೆಲೆ ನಿಂತವರು. ಇವರ ತಂದೆಯ ಹಿಂದಿನ ತಲೆಮಾರಿನವರೆಲ್ಲರೂ ನಿರಕ್ಷರರಾದರೂ ಕೂಡ ಮನೆತನದ ಮೂಲ ಉದ್ಯೋಗ ನೇಕಾರಿಕೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಕೌಶಲದ ಬದುಕನ್ನು ರೂಢಿಸಿಕೊಂಡವರು. ಮಹಾದೇವ ಬಸರಕೋಡ ಅವರು ಆಲಮಟ್ಟಿ ಮತ್ತು ನಿಡಗುಂದಿಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಧಾರವಾಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೆ.ಎಸ್.ಎಸ್ ಕಾಲೇಜನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಾಗಲೇ ಸಾಹಿತ್ಯ ಕ್ಷೇತ್ರದ ಸೆಳೆತಕ್ಕೆ ಒಳಗಾದರು. ಪದವಿ ಶಿಕ್ಷಣವನ್ನು ವಿಜಯಪುರದ ಬಿ.ಎಲ್.ಡಿ.ಎ ಸಂಸ್ಥೆಯಲ್ಲಿ, ಬಿ.ಇಡಿ ಶಿಕ್ಷಣವನ್ನು ಇಲಕಲ್ಲನ ಎಸ್.ಆರ್.ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 1999 ರಿಂದಲೂ ಸರಕಾರಿ ಪ್ರೌಢಶಾಲಾ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರಾಗಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬದುಕು ಬೆಳಕು, ವಿಚಾರ ಸಂಪದ, ಒಡಲುಗೊಂಡವ, ತಮಂಧ ಘನ ಕಳೆದು, ಹಸಿವೆಂಬ ಹೆಬ್ಬಾವು, ಒಳಗಣ ಬೆಳಗು, ಎಲ್ಲ ಎಲ್ಲೆಗಳ ದಾಟಿ, ನಿಂದ ಹೆಜ್ಜೆಯ ಮೀರಿ, ವರ್ತಮಾನದಲ್ಲಿ ನಿಂತು, ಸಂವೇದನೆ, ಕೋಡಗನ ಕೋಳಿ ನುಂಗಿ, ಆರದಿರಲಿ ಬೆಳಕು, ಇರುವ ಭಾಗ್ಯವ ನೆನೆದು, ಸುರಧೇನು ಸೇರಿದಂತೆ ಹದಿನಾಲ್ಕಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರಸರವೇಕೆ ಅಲೆಗಳೇ, ಬೇಲಿ ಮುಳ್ಳಿನ ನಡುವೆ, ಬೆದರದಿರು ಮನಸೇ, ಒಡಲುರಿಯ ಅಳಿದು ಸೇರಿದಂತೆ ಹತ್ತಾರು ಭಾವಗೀತೆಗಳ ಮೂಲಕ ಭಾವಗೀತೆ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿ ಜನಮನ್ನಣೆ ಪಡೆದಿದ್ದಾರೆ. ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ವಿಶ್ವವಾಣಿ ಸೇರಿದಂತೆ ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಇವರ ಚಿಂತನೆ, ಅಂಕಣ ಬರಹಗಳು ಪ್ರಕಟಗೊಳ್ಳುತ್ತಿವೆ. ಆಕಾಶವಾಣಿಯಲ್ಲಿ ಚಿಂತನೆಗಳು ಬಿತ್ತರಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಿಂತನೆಗಳು ತುಂಬ ಜನಪ್ರಿಯಗೊಂಡಿವೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಮೈಸೂರು ದಸರಾ, ಚಾಲುಕ್ಯ ಉತ್ಸವ, ಕೆ.ಎಸ್.ಎನ್ ಪ್ರತಿಷ್ಠಾನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ ಸೇರಿದಂತೆ ಹತ್ತು ಹಲವು ಸಮ್ಮೇಳನದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಮಹಾದೇವ ಬಸರಕೋಡ ಅವರ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಯ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಸಜನಾ ಉತ್ತಮ ಶಿಕ್ಷಕ ಪ್ರಶಸ್ತಿ, ಅಂಕಣ ಬರಹಕ್ಕಾಗಿ ರಾಜ್ಯ ಮಟ್ಟದ ತೋಂಟದ ಸಿದ್ದಲಿಂಗ ಶ್ರೀ ಉತ್ತಮ ಅಂಕಣಕಾರ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಯನೈನ್ ಮಿಡಿಯಾ ಬ್ರಾಡ್‌ಕಾಸ್ಟಿಂಗ್ ರಾಜ್ಯಮಟ್ಟದ ಉತ್ತಮ ಅಂಕಣಕಾರ ಪ್ರಶಸ್ತಿ, ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಬೆಂಗಳೂರು ಇವರಿಂದ ಸಮಗ್ರ ಸಾಹಿತ್ಯ ಸೇವೆಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.
ಸುರಧೇನು ಕೃತಿಗೆ ವಿಜಯಪುರದ ಪುಸ್ತಕ ಪ್ರಕಾಶನ ನೀಡುವ ರಾಜ್ಯ ಮಟ್ಟದ ತೋಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ-2024, ಆಲಮೆಲದ ಬೆರಗು ಪ್ರಕಾಶನ ನೀಡುವ ಸೃಜನೇತರ ವಿಭಾಗದಲ್ಲಿ ನೀಡುವ ದಿ. ಯಮುನಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ನೀಡುವ ಪುಸ್ತಕ ಪ್ರಶಸ್ತಿ-2024, ಹಸಿವೆಂಬ ಹೆಬ್ಬಾವು, ನಿಂದ ಹೆಜ್ಜೆಯ ಮೀರಿ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಟ್ಟದ ದತ್ತಿ ಪ್ರಶಸ್ತಿ, ಸೇರಿದಂತೆ ಇವರ ಇತರ ಕೃತಿಗಳಿಗೆ ರಾಜ್ಯ ಮಟ್ಟದ ಚೇತನ ಪುರಸ್ಕಾರ, ಮೇಘ ಮೈತ್ರಿ ಪ್ರಶಸ್ತಿ ಸಂದಿವೆ.