About the Author

ಲೇಖಕ ಮನೋಹರ ಜನ್ನು ಅವರು ಮೂಲತಃ ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮದವರು. ತಂದೆ ಜನಾರ್ದನ ಜನ್ನು ಹಾಗೂ ತಾಯಿ ವತ್ಸಲಾ ಜನ್ನು. 25-12-1953 ರಂದು ಜನನ. ಸ್ನಾತಕೋತ್ತರ ಪದವೀಧರರು. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಗಣಕಯಂತ್ರ ಬರಹಗಾರರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಪರಿಸರ ಹೋರಾಟಗಾರರು. 

ಕೃತಿಗಳು: ಇವರ ಮಕ್ಕಳ ಕವನ ಸಂಕಲನ- ‘ಚುಕ್ಕಿ ಚಿತ್ತಾರ’. ರಾಜ್ಯ ಪ್ರಕಾಶಕ ಬರಹಗಾರ ಸಂಘದಿಂದ (2094) ಮೊದಲ ಬಹುಮಾನ ಪುರಸ್ಕಾರ ಲಭಿಸಿದೆ. ಕಾಲನ ತಂಬೂರಿ (ಕವನ ಸಂಕಲನ), ಚೈತ್ರಯಾತ್ರೆ,ಚುಟುಕುಮಾಲೆ-೧ (ಕಥಾ ಸಂಕಲನ), ಪರಿಷತ್ತಿಗೆ ಶಾಪವಾಗದಿರಿ (ವೈಚಾರಿಕ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ, ಕತೆ,ಕವನಗಳು ಪ್ರಕಟವಾಗಿವೆ. ಈವರೆಗೂ ಅವರು 15000 ಚೌಪದಿಗಳನ್ನು ರಚಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಕನ್ನಡದ ಹಲವು ಕಾರ್ಯಕ್ರಮಗಳನ್ನು ಹಾಗೂ ಗೋವಾ ಆಕಾಶವಾಣಿಯಲ್ಲಿ ಕೊಂಕಣಿ ಕಾರ್ಯಕ್ರಮಗಳನ್ನು ನೀಡಿದ್ದು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ರೈತ-ಕಾರ್ಮಿಕರ ಹೋರಾಟಗಳಲ್ಲೂ ಭಾಗಿಯಾಗಿದ್ದಾರೆ.  

ಪ್ರಶಸ್ತಿ-ಗೌರವ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಾಹಿತ್ಯ ಸಮ್ಮೆಳದ ಸರ್ವಾಧ್ಯಕ್ಷರು, ಜೋಯಿಡಾದಲ್ಲಿ ನಡೆದ ಚುಟುಕು ಸಾಹಿತ್ಯ (2009-12) ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರು, ಗೋಕಾಕ ಚಳವಳಿಯ ತಾಲೂಕು ಸಂಚಾಲಕರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ (2005-08) ಹೀಗೆ ಕನ್ನಡ ಸೇವಾನಿರತರು. ಮುಂಬೈಯ ಯಂಗ್ ಇಂಡಿಯಾ ಎಜ್ಯುಕೇಶನ್ ಸೊಸೈಟಿಯ ವಜ್ರಮಹೋತ್ಸವ ಪ್ರಯುಕ್ತ ಕವನ ಸ್ಪರ್ಧೆಯ ಬಹುಮಾನ, ಚಾಮರಾಜನಗರ ಜಿಲ್ಲಾ ಬರಹಗಾರರ ಹಾಗೂ ಕಲಾವಿದರ ಬಳಗದ ಸ್ಪರ್ಧೆಯಲ್ಲಿ ಬಂಗಾರದ ಪದಕ, 2004ರಲ್ಲಿ ಬರಹಗಾರರು ಹಾಗೂ ಕಲಾವಿದರ ವೇದಿಕೆಯಿಂದ ರಾಜ್ಯದ ಅತ್ಯುತ್ತಮ ಮಕ್ಕಳ ಪ್ರಶಸ್ತಿ, ಅಂತಾರಾಜ್ಯ ಕವನ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ. 

ಮನೋಹರ ಜನ್ನು

(25 Dec 1953)