About the Author

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946 ರ ಜುಲೈ 27 ರಂದು  ಮನು (ಪೆನುಗೊಂಡೆ ನರಸಿಂಹರಂಗನ್‌) ಜನಿಸಿದರು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ. ಮೆಕ್ಯಾನಿಕಲ್‌ ಎಂಜಿನಿಯರರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಾಹ್ಯ ವಿದ್ಯಾರ್ಥಿಯಾಗಿ  ಎಂ.ಎ. ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಮನಃಶಾಸ್ತ್ರ) ಪದವೀಧರರು. ಮೈಸೂರಿನ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ. ನಂತರ ಕೆ.ಜಿ.ಎಫ್‌.ನ ಭಾರತ್‌ ಅರ್ಥ್‌‌ಮೂವರ್ಸ್‌ನಲ್ಲಿ ಸಂಶೋಧನಾ ಎಂಜಿನಿಯರಾಗಿ, ಚೆನ್ನೈನ ಬ್ರೇಕ್ಸ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್‌ ಎಂಜನಿಯರಾಗಿ,  ಪುಣೆಯ ಆಟೋಮೊಬೈಲ್‌ ರಿಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾದಲ್ಲಿ ಡೆಪ್ಯುಟಿ ಡೈರೆಕ್ಟರ್ , ಸೀನಿಯರ್ ಡೆಪ್ಯುಟಿ ಡೈರೆಕ್ಟರಾಗಿ, ವೊಲ್ವೊ ಕಂಪನಿಯ ಸಮಾಲೋಚಕರಾಗಿದ್ದರು. ‘ಮಹಾಸಂಪರ್ಕ’ ಕಾದಂಬರಿಯನ್ನು ಬರೆಯಲೆಂದೇ ಸ್ವಯಂ ನಿವೃತ್ತಿ ಪಡೆದಿದ್ದರು. 

ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದ ‘ಆನಂದಿ’ ಕತೆಯು ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆಯಿತು. ‘ದ್ವಂದ್ವ’ ಕಾದಂಬರಿಯು ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಪರ್ವತಾರೋಹಿ ಅನುಭವದ ‘ಹಿಮಜ್ವಾಲೆ’, ಕಾರ್ಪೊರೇಟ್‌ ಪ್ರಪಂಚದ ಹೋರಾಟದ ‘ಚಕ್ರ’, ಏಯ್ಡ್ಸ್ ಹಿನ್ನೆಲೆಯ ‘ಐರಾವತ’, ಅಣ್ವಸ್ತ್ರ ನಿಶ್ಶಸ್ತ್ರೀಕರಣದ ವಸ್ತುವನ್ನೊಳಗೊಂಡ ‘ಮಹಾಪ್ರಸ್ಥಾನ; ಸ್ಟೀಫನ್ ಹಾಕಿನ್ಸ್‌ ಜೀವನವನ್ನಾಧರಿಸಿದ ‘ಮುಸುಕಿದೀ ಮಬ್ಬಿನಲಿ’, ಆಕಾಶಯಾನದ ‘ಸುದರ್ಶನಚಕ್ರ’-ಇವರ ಪ್ರಮುಖ ಕೃತಿಗಳು. ಇವಲ್ಲದೆ ಅಯನ, ನೇಪಥ್ಯ, ಖೆಡ್ಡ, ಗ್ರಸ್ತ, ಸಂಚು ಹೀಗೆ ಒಟ್ಟು17 ಕಾದಂಬರಿಗಳು; ಕನಕಾಂಬರ, ಕಾರಸ್ಥಾನ, ಜೀವಚ್ಛವ ಮೊದಲಾದ ರೂಪಾಂತರ ಕಾದಂಬರಿಗಳು; ಆಷಾಢದ ಮೋಡಗಳು, ಅಂಕುಶ, ಕಾಳಗ, ಸಂಧಿಕಾಲ ಮೊದಲಾದ 8 ಮಿನಿಕಾದಂಬರಿಗಳು ಪ್ರಕಟಗೊಂಡಿವೆ. 1980ರಲ್ಲಿ, ನಿರ್ದೇಶಕ ಜೋಸೈಮನ್ ಅರವರು ಚಕ್ರವ್ಯೂಹ ಕಾದಂಬರಿ ಆಧರಿಸಿ ‘ಸಾಹಸಸಿಂಹ’ ಚಲನಚಿತ್ರವನ್ನೂ ನಿರ್ದೇಶಿಸಿದ್ದರೆ, 1988ರಲ್ಲಿ ನಾಗಾಭರಣರವರು ಅಯನ ಕಾದಂಬರಿಯನ್ನಾಧರಿಸಿ ಆಸ್ಫೋಟ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಇವರಿಗೆ  ರಾಜ್ಯ ಸರಕಾರದ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯೂ ದೊರೆತಿದೆ.

ಕನ್ನಡ ಪ್ರಭ ಪತ್ರಿಕೆಯಲ್ಲಿ ‘ದೃಷ್ಟಿ’ ಮತ್ತು ಸುಧಾ ವಾರಪತ್ರಿಕೆಗಾಗಿ ‘ವಿಚಾರ ಕಿರಣ’ ಎಂಬ ಅಂಕಣ ಬರೆಯುತ್ತಿದ್ದರು. ‘ಆತ್ಮಾನ್ವೇಷಣೆಯ ಸಾಧನೆಗಳು’ ಗಾಂಧೀಜಿ ಕುರಿತು ಅನುವಾದ ಕವಿತೆಗಳ ಕೃತಿ. ಜಿ.ವಿ. ದಾಮೋದರನಾಯುಡು ಅವರ ಜೀವನ ಚರಿತ್ರೆ ‘ಕಸದಿಂದ ರಸ’ ಹಾಗೂ ಇವರದೇ ಸಾಹಿತ್ಯಿಕ ಆತ್ಮಕಥನರೂಪ ‘ಕಥೆಯೊಳಗಿನ ಕಥೆ’ ಪ್ರಕಟಗೊಂಡಿದೆ. 20ನೇ ಶತಮಾನದ ಸ್ವರ್ಗ’ ಮತ್ತು ‘ಹೊಟ್ಟೆ ಹೊಕ್ಕ ವಿಧಿ’ ನಾಟಕಗಳು. ‘ಮಕ್ಕಳಿಗಾಗಿ ಸಣ್ಣಕಥೆಗಳು’, ‘ಮಹಾಭಾರತದ ನೀತಿ ಕಥೆಗಳು’, ‘ಈಜಿಪ್ತಿನ ಕಥೆಗಳು’ ಮುಂತಾದ ಮೂರು ಸಂಕಲನ’ ಗಳನ್ನು ಹೊರತಂದಿದ್ದಾರೆ. ಗ್ರೀಸ್‌, ಈಜಿಪ್ತ್‌, ಇಟಲಿ, ಸ್ವೀಡನ್‌,ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ದೇಶಗಳನ್ನು ಸುತ್ತಿ ಬಂದು ರಚಿಸಿದ ಪ್ರವಾಸ ಕೃತಿಗಳು ‘ಈಜಿಪ್ತ್ ಪ್ರವಾಸ’ ಹಾಗೂ ‘ಸಮುದ್ರಮಂಥನ’(ಕಾಂಬೋಡಿಯಾ ಪ್ರವಾಸ ಕಥನ). ‘ಸೂರ್ಯಪಾನ’ದ ಬಗ್ಗೆ ಇದ್ದ ಆಸಕ್ತಿಯಿಂದ ವಿಶೇಷ ಅಧ್ಯಯನ ನಡೆಸಿ ಉಪನ್ಯಾಸ ನೀಡಿದ್ದಾರೆ. ‘ವ್ಯಾಸ ಮಹಾಭಾರತ’ ಗ್ರಂಥ ಪ್ರಕಟಗೊಂಡಿದೆ. ಇವರು 2011 ನವೆಂಬರ್ 8 ರಂದು ನಿಧನರಾದರು. 

ಮನು (ಪೆನುಗೊಂಡೆ ನರಸಿಂಹರಂಗನ್‌)

(27 Jul 1946-08 Nov 2011)