About the Author

ನಿ. ರಾಜಶೇಖರ (ನಿಜಲಿಂಗಪ್ಪ ರಾಜಶೇಖರ) ಚಿತ್ರದುರ್ಗದವರು. 9.9.1932 ರಲ್ಲಿ ಜನನ. ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರ ಮೂರನೆಯ ಪುತ್ರ. ಅವರು, ಶಿಕ್ಷಣ ಪಡೆದಿದ್ದು ಕೇವಲ ಇಂಟರ್ ಮೀಡಿಯೇಟ್ ವರೆಗೆ ಮಾತ್ರ. ತಾಯಿ ಮುರಿಗೆಮ್ಮ. ಚಿತ್ರದುರ್ಗ ಬಳಿ ತೋಟಗಾರಿಕೆ ಕೃಷಿಯಲ್ಲಿ ತೊಡಗಿದ್ದರು. ಮದುವೆ ಮಾಡಿಕೊಳ್ಳಲಿಲ್ಲ. 

ಸಿದ್ಧಲಿಂಗಶಾಸ್ತ್ರಿಗಳಿಂದ ಸಂಸ್ಕೃತ ಕಲಿತರು.  ಕೃಷಿ ಮಾಡುತ್ತಲೇ ಸಾಹಿತ್ಯದ ಓದು ನಿರಂತರವಾಗಿತ್ತು. ಕಾಳಿದಾಸನ ಮೇಘದೂತ ಹಾಗೂ ಶಬರ ಶಂಕರವಿಳಾಸ ಕೃತಿಗಳನ್ನು ಹಾಗೂ ಸಹೋದರ ಉಮಾಕಾಂತ ಅವರೊಂದಿಗೆ ‘Blue Bird’ ಅನ್ನುವ ಇಂಗ್ಲಿಷ್ ನಾಟಕವನ್ನು(ಫ್ರೆಂಚ್ ಸಾಹಿತಿ ಮಾರಿಸ್ ಮೇಯರ್) ಕನ್ನಡಕ್ಕೆ ‘ನೀಲಿಹಕ್ಕಿ’ ಎಂದು ಅನುವಾದಿಸಿದರು. 1911ರಲ್ಲಿ ನೊಬೆಲ್ ಬಹುಮಾನ ಪಡೆಯಿತು. ಅಣ್ಣ ಉಮಾಕಾಂತ, ಅಕ್ಕ ಸಾಹಿತಿ ಪಾರ್ವತಮ್ಮ ಜೊತೆಗೂಡಿ ಕನ್ನಡ ಭಾಷೆಯಲ್ಲಿ ವರ್ಗೀಕೃತ ಪದಕೋಶವನ್ನು ರಚಿಸಿದ್ದು, 1994ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ತಂದೆ ಶ್ರೀ ನಿಜಲಿಂಗಪ್ಪನವರು 1970ರಲ್ಲಿ ದಿಲ್ಲಿಯಿಂದ ಮರಳಿದಾಗ ತೆಂಗಿನ ತೋಟ ಮಾರಿ ಚಿತ್ರದುರ್ಗಕ್ಕೆ ಬಂದು ತಂದೆ-ತಾಯಿ ಸೇವೆ ಮಾಡಿದರು. ಕುವೆಂಪು ಅವರ ‘ಶ್ರೀರಾಮಾಯಣಂ ದರ್ಶನ’ವು ಹೊಸ ಹೊಸ ಶಬ್ದ ಸಂಪತ್ತು, ಸಂಧಿ ಸಮಾಸಗಳ ಬಿಗಿ ಬಂಧ, ವರ್ಣನೆಯ ವೈಭವ, ಉಪಮೆ – ಅಲಂಕಾರಗಳ ಶ್ರೇಷ್ಟ ನಿರೂಪಣೆ ಹಾಗೂ ಕಾವ್ಯದ ವಿಶೇಷವಾಗಿರುವ ಪಾತ್ರಗಳು ಘಟನೆಗಳು, ಮಹೋಪಮೆಗಳು, ಅಪೂರ್ವವಾದ ಕಾವ್ಯಕಲ್ಪನೆ, ಹೊಸ ಚಿಂತನೆಯ ಸೃಜನೆ ಹೀಗೆ ಎಲ್ಲವೂ ಜನಸಾಮಾನ್ಯ ಓದುಗರಿಗೆ ಸ್ವಲ್ಪ ಕಷ್ಟವೆನಿಸುತ್ತಿವೆ ಎಂಬ ಹಿನ್ನೆಲೆಯಲ್ಲಿ ಇವರು ತೀರಾ ಸರಳವಾಗಿ ಆ ಗದ್ಯದ ಅನುವಾದ ಮಾಡಿದ್ದು ಇವರ ಹೆಗ್ಗಳಿಕೆ. ಸ್ವತಃ ಕುವೆಂಪು ಅವರು ತಮ್ಮದೇ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ಸರಳ ಗದ್ಯಾನುವಾದವನ್ನು ಮೆಚ್ಚಿಕೊಂಡು ಮುನ್ಡಿನುಡಿ ಬರೆದ ‘ಪದ್ಯಕಥನವನ್ನು ಆಧುನಿಕ ಗದ್ಯಕ್ಕೆ ಅಳವಡಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆನ್ನುವುದಕ್ಕೆ ಅವರ ಈ ಕೃತಿ ಸಾಕ್ಷಿಯಾಗಿದೆ’ ಎಂದು ಪ್ರಶಂಸಿಸಿದ್ದರು. ಈ ಕೃತಿಯು ಹಲವು ಮುದ್ರಣಗಳನ್ನು ಕಂಡಿದೆ. ಅವರು ಬದುಕಿದ್ದಾಗಲೇ ತಮ್ಮ ಕಣ್ಣು ಮತ್ತು ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನಮಾಡಿದ್ದರು. ನಿ. ರಾಜಶೇಖರ ಅವರು 9.10.2008 ರಂದು ನಿಧನರಾದರು.

 

 

 

ನಿ. ರಾಜಶೇಖರ

(09 Sep 1932-09 Oct 2008)