About the Author

ಶಿಕ್ಷಣ, ಸಮುದಾಯಾಭಿವೃದ್ಧಿ ಮತ್ತು ಸ್ಥಳೀಯಾಡಳಿತ ಕ್ಷೇತ್ರಗಳಲ್ಲಿ ಐದು ದಶಕಗಳಿಂದ ಶ್ರಮಿಸುತ್ತಾ ಬಂದ ಎಸ್. ಜನಾರ್ದನ ಅವರು ಮೂಲತಃ ಮರವಂತೆಯವರು. 21-03-1939 ರಂದು ಜನಿಸಿದರು. ತಂದೆ-ಶಿಕ್ಷಕ ಎಸ್. ಮಂಜುನಾಥಯ್ಯ, ತಾಯಿ- ಜಾನಕಿ. ಮರವಂತೆ, ಶಿರೂರು, ಬೈಂದೂರಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಕರ್ನಾಟಕ ವಿ.ವಿ.ಯಿಂದ ರಾಜ್ಯಶಾಸ್ತ್ರದಲ್ಲಿ, ಮೈಸೂರು ವಿ.ವಿ.ಯಿಂದ ಆಂಗ್ಲ ಸಾಹಿತ್ಯದಲ್ಲಿ ಪ್ರತ್ಯೇಕ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಶಿಕ್ಷಣದಲ್ಲಿ ಹಾಗೂ ಹೈದರಾಬಾರಿನ ಕೇಂದ್ರೀಯ ಆಂಗ್ಲ ಮತ್ತು ವಿದೇಶಿ ಭಾಷೆಗಳ ಅಧ್ಯಯನ ಸಂಸ್ಥೆಯಿಂದ ಆಂಗ್ಲಭಾಷಾ ಬೋಧನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಮರವಂತೆಯ ಶ್ಯಾನುಭೋಗರು,  ನಾಡ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದರು. 1966 ರಲ್ಲಿ ಶಿಕ್ಷಣ ಕ್ಷೇತ್ರ ಪ್ರವೇಶಿಸಿ ಖಂಬದಕೋಣೆ, ಕುಂದಾಪುರ, ಬೈಂದೂರು, ಶಂಕರನಾರಾಯಣದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಚಿಕ್ಕಮಗಳೂರಿನ ಸಖರಾಯಪಟ್ಟಣ ಮತ್ತು ನಾವುಂದದಲ್ಲಿ ಉಪನ್ಯಾಸಕರಾಗಿ  1997ರಲ್ಲಿ ನಿವೃತ್ತರಾದರು.ಅವರು ನಡೆಸಿದ್ದ ಶೈಕ್ಷಣಿಕ ಪ್ರಯೋಗಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ ಪುರಸ್ಕಾರ ಲಭಿಸಿದೆ. ಮಂಗಳೂರು ಆಕಾಶವಾಣಿಯಲ್ಲಿ ಆಂಗ್ಲಭಾಷೆಯಲ್ಲಿ ರೇಡಿಯೋ ಪಾಠಗಳನ್ನು ಪ್ರಸ್ತುತಪಡಿಸಿದ್ದಾರೆ. ರಾಜ್ಯದ ಪಂಚಾಯತ್ ರಾಜ್ ವಿಷಯ ಪರಿಣಿತರ ನೆಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಶ್ರೀಪೆರುಂಬೂದೂರಿನ ರಾಜೀವ ಗಾಂಧಿ ರಾಷ್ಟ್ರೀಯ ಯುವಜನ ಅಭಿವೃದ್ಧಿ ಸಂಸ್ಥೆ, ಬೆಂಗಳೂರಿನ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ, ಗುಜರಾಜಿನ ಕಚ್ ನವನಿರ್ಮಾಣ ಅಭಿಯಾನ ದೇಶದ ಯೋಜನಾ ಆಯೋಗ ನಡೆಸಿದ ವಿವಿಧ ಅಧ್ಯಯನ, ಬೋಧನೆ, ತರಬೇತಿ ಮತ್ತು ಸಂವಹನ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿ-ತರಬೇತಿದಾರರಾಗಿ, ಪಠ್ಯಕ್ರಮ ಮತ್ತು ಪಠ್ಯ ಸಿದ್ಧತೆಯಲ್ಲಿ ದುಡಿದಿದ್ದಾರೆ. ಲೇಖಕ, ಪತ್ರಕರ್ತರಾಗಿಯೂ ಗಮನ ಸೆಳೆದಿದ್ದಾರೆ. ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಬೈಂದೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದಾರೆ. ವಿವಿಧ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿಗಳ ಗೌರವ ನೀಡಿವೆ. ಪಂಚಾಯತ್ ಆಡಳಿತ ವ್ಯವಸ್ಥೆ ಮಹತ್ವ ತಿಳಿಸುವ ‘ಜನಾಧಿಕಾರ’ ಕೃತಿ ರಚಿಸಿದ್ದಾರೆ. 

ಎಸ್. ಜನಾರ್ದನ ಮರವಂತೆ

(21 Mar 1939)