About the Author

ಶಾ.ಮಂ. ಕೃಷ್ಣರಾವ್ ಮೂಲತಃ ಬೆಳಗಾವಿಯವರು. ತಂದೆ- ಮಂಜುನಾಥ ಶ್ಯಾನಭಾಗ, ತಾಯಿ- ಗಂಗಾದೇವಿ. ಪ್ರಾಥಮಿಕ -ಪ್ರೌಢಶಿಕ್ಷಣವನ್ನು ಸಿದ್ಧಾಪುರದಲ್ಲಿಪಡೆದರು. ಉದ್ಯೋಗದ ನಿಮಿತ್ತ ತಂದೆಯವರು ಗೋವಾಗೆ ವಾಸ್ತವ್ಯ ಬದಲಿಸಿದ್ದರಿಂದ ಇವರ ಕಾಲೇಜು ಶಿಕ್ಷಣ ಗೋವಾದಲ್ಲಿ ಮುಂದುವರೆಯಿತು.

ಸಿದ್ದಾಪುರ ತಾಲೂಕಿನ ಅಳವಳ್ಳಿ ಶಾಲೆಯಲ್ಲಿ  ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು.  ಬಾಹ್ಯವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಪದವಿ ಪೂರ್ಣಗೊಳಿಸಿದರು. ಗೋವಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಸೇರಿ ಜ್ಯೂನಿಯರ್ ಕಾಲೇಜು ಮಟ್ಟದ ತರಗತಿಗಳಿಗೂ ಬೋಧಿಸಿ, 41 ವರ್ಷಗಳ ಸೇವೆಯ ನಂತರ ನಿವೃತ್ತಿಯಾದರು.

ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿದ್ದು, ಅಲ್ಲಿದ್ದ ಕೇವಲ 813 ಕನ್ನಡಿಗರಿಗೆ (1961 ಜನಗಣತಿ ಪ್ರಕಾರ) ಕನ್ನಡ ಕಲಿಸಲು ಪಣತೊಟ್ಟರು. ಗೋವಾದಲ್ಲಿದ್ದ ಬಹುತೇಕ ಕನ್ನಡಿಗರು ಕೆಳದರ್ಜೆಯ ನೌಕರರೇ.ಅಲ್ಲಿಯ ಮನೆಯೊಳಗೆ ಅಲ್ಪಸ್ವಲ್ಪ ಕನ್ನಡ ಧ್ವನಿ ಕೇಳ ಬಹುದಿತ್ತೇ ವಿನಃ ರಸ್ತೆಗಿಳಿದರೆ ಗೋವಾ ಭಾಷೆ- ಕೊಂಕಣಿಯೆ ಇರುತ್ತಿತ್ತು.ಅಲ್ಲಿಯ ತೋಟ, ತಳವಾರರ ಮಕ್ಕಳನ್ನು ಕರೆದು ಕನ್ನಡ ಕಲಿಸಲು ಶುರು ಮಾಡಿದರು. ಜೊತೆಗೆ ಗೋವಾದಲ್ಲಿ 1963ರಲ್ಲಿ ಕನ್ನಡ ಸಂಘ ಸ್ಥಾಪಿಸಿ ಆಮೂಲಕ ಕನ್ನಡದ ಸೇವೆಗೆ ಮುಂದಾದರು. 

ಕನ್ನಡ ಓದುಗರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಪುಸ್ತಕ ಪ್ರಕಟಣೆ ಆರಂಭಿಸಿದರು.  ರಾಜಧರ್ಮ(ಪೌರಾಣಿಕ), ಬಂಡಲ್ ಬಹದ್ದೂರ್, ಮುದ್ದಾಳರು, ಮಾಮೂಲು ಸೇರಿದಂತೆ ಹಲವು ನಾಟಕಗಳನ್ನು ರಚಿಸಿ, ಪ್ರಕಟಿಸಿದ್ದಾರೆ. ಗೋವಾದ ದೇವಾಲಯಗಳ ಬಗ್ಗೆ ಕರ್ನಾಟಕದಲ್ಲಿದ್ದವರಿಗೆ ತಿಳಿಸಲು ಬರೆದ ಪುಸ್ತಕ ಗೋವೆಯ ದೇವಾಲಯಗಳ ಚರಿತ್ರೆಯ ‘ದೇವಭೂಮಿ ಗೋಮಂತಕ’ ಮತ್ತು ಗೋವಾ ಸೌಂದರ್ಯವನ್ನು ವಿವರಿಸುವ ಕೃತಿ ‘ಸೌಂದರ್ಯನಿಧಿ ಗೋವಾ’ ಇವರ ಕೃತಿಗಳಾಗಿವೆ. ಮಕ್ಕಳಿಗಾಗಿ ‘ಗೋವ ಕದಂಬ ಕುಲ’, ವರಕವಿ ತಿಪ್ಪಯ್ಯ ಮಾಸ್ತರರು, ಬಸವರಾಜ ಮನ್ಸೂರ್, ಹಾವನೂರು ಸಂಸ್ಥಾನ, ಬಳ್ಳಾರಿ ಬೀಚಿ, ಅ.ನ.ಕೃಷ್ಣರಾಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಮನ್ಸೂರರ ಮನೆತನದ ವ್ಯಕ್ತಿ ಚಿತ್ರಣ ನೀಡುವ ‘ಚಿಗುರು ನೆನಪು’ ಎಸ್.ಎನ್. ಕೇಶವೈನ್‌ರ ಜೀವನ ಚಿತ್ರಣದ ‘ಬೆಳಕಿನ ಬದುಕು’, ನಟಶೇಖರ ಬಸವರಾಜ ಮನ್ಸೂರ್, ಪಾಪು (ಪಾಟೀಲ ಪುಟ್ಟಪ್ಪ), ಕುಂಚ ಬ್ರಹ್ಮ ಮಡಿವಾಳಪ್ಪ ಮಿಣಜಿಗಿ, ಮಹಾತ್ಮ ಜ್ಯೋತಿರಾವ್ ಪುಲೆ, ಅ.ನ. ಕೃಷ್ಣರಾಯರು ಮುಂತಾದವರ ವ್ಯಕ್ತಿಚಿತ್ರಗಳನ್ನು ಪ್ರಕಟಿಸಿದ್ದಾರೆ.

ಶಾ.ಮಂ. ಕೃಷ್ಣರಾಯ

(01 Jun 1942)