About the Author

ಲೇಖಕ, ಕಲಾವಿದ ಶ್ರೀಕೃಷ್ಣಭಟ್‌ ಅರ್ತಿಕಜೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಡುವನ್ನೂರು ಅರ್ತಿಕಜೆಯಲ್ಲಿ ಜನಿಸಿದರು. ತಂದೆ ಶ್ಯಾಮಭಟ್, ತಾಯಿ ಸಾವಿತ್ರಿ ಅಮ್ಮ. 1969ರಲ್ಲಿ ಬಿ.ಎ. ಪದವಿ(ಕಾಸರಗೋಡು ಸರಕಾರಿ ಕಾಲೇಜು), 1971ರಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಪಡೆದರು. ಮದರಾಸು ವಿಶ್ವವಿದ್ಯಾಲಯದಲ್ಲಿ “ಕನ್ನಡದಲ್ಲಿ ಶಾಸನ ಸಾಹಿತ್ಯ” ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು. ನಂತರ ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ರೀಡರ್, ಪ್ರಾಧ್ಯಾಪಕ, ಮುಖ್ಯಸ್ಥರಾದರು. 

‘ಸೂತಭಾರತ, ಸಹಸ್ರಾರ್ಧ ತುಳು ಗಾದೆಗಳು, ಹವ್ಯಕ ಗಾದೆಗಳು, ಜನಪ್ರಿಯ ತುಳು ಗಾದೆಗಳು, ಹವ್ಯಕ ಭಾಷೆಯ ನುಡಿ ಸಂಸ್ಕೃತಿ, ಪಡೆನುಡಿ ಕೋಶ’ ಅವರ ಸಂಪಾದಿತ ಕೃತಿಗಳು. ಅಯ್ಯಪ್ಪ ರಾಮರಾಜ ಬಹದ್ದೂರ್, ವಿಷಕನ್ನಿಕೆ (ಮಲೆಯಾಳಂ ಕಾದಂಬರಿ), ಸಮಾಜವಿಜ್ಞಾನಿ ಪೆರಿಯಾರ್, ತಮಿಳು ನಾಡಿನ ಇತಿಹಾಸ ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಮೃತೋತ್ಸವ ಸನ್ಮಾನ, ರಾಷ್ಟ್ರೀಯ ಸುವರ್ಣ ಮಹಾನ್ ಶ್ರೀರತ್ನ ಪ್ರಶಸ್ತಿ, ವಿಶಿಷ್ಟ ಹಿಂದಿ ಸೇವಾ ಸಮ್ಮಾನ್ ಪ್ರಶಸ್ತಿ, ಮುನ್ಷಿಪ್ರೇಮ ಚಂದ್ ಸನ್ಮಾನ್, ತಮಿಳುನಾಡು ಉರ್ದು ಅಕಾಡಮಿಯಿಂದ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ ಗೌರವಗಳು ಲಭಿಸಿವೆ. 

ಶ್ರೀಕೃಷ್ಣಭಟ್‌ ಅರ್ತಿಕಜೆ