About the Author

ಕವಿಯಾಗಿದ್ದ ಟಿ. ಕೇಶವಭಟ್ಟ ಅವರು ಛಂದಸ್ಸು, ವ್ಯಾಕರಣ, ಅಲಂಕಾರ ಸೇರಿದಂತೆ ಕನ್ನಡ ಸಾಹಿತ್ಯದ ಶಾಸ್ತ್ರ ವಿಭಾಗದಲ್ಲಿ ಮಹತ್ವದ ವಿದ್ವಾಂಸರಾಗಿದ್ದರು. ಅವರು ಹುಟ್ಟೂರು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ. 1920ರ ಫೆಬ್ರುವರಿ 2 ರಂದು ಜನಿಸಿದರು.

ಕೃಷಿಕರಾಗಿದ್ದ ತಂದೆ ಗೋವಿಂದ ಭಟ್ಟರು ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲಿಯೂ ಆಸಕ್ತರಾಗಿದ್ದರು. ಅವರ ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಪೆರೋಡಿಯಲ್ಲಿ ಪಡೆದರು. ಹೈಸ್ಕೂಲು ಸೇರಿ ಎಂಟನೆಯ ತರಗತಿ ಓದಿ ಪಾಸಾದರೂ ಮುಂದೆ ಓದಲಾಗಲಿಲ್ಲ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಬೇಕಾಯಿತು. ಕಾಸರಗೋಡು ಬೋರ್ಡ್‌ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿ ಆರಂಭಿಸಿದರು. ಕನ್ನಡ-ಸಂಸ್ಕೃತ ಅಧ್ಯಯನ. ಯಕ್ಷಗಾನ ಕಲಾಭ್ಯಾಸ ಅವರ ಹವ್ಯಾಸಗಳಾಗಿದ್ದವು. ಸ್ವತಂತ್ರವಾಗಿ ಓದಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ-ಸಂಸ್ಕೃತ ಪರೀಕ್ಷೆಯಲ್ಲಿ ಪಡೆದ ವಿದ್ವಾನ್‌ ಪದವಿ, ಹಿಂದಿ ವಿಶಾರದ ಪರೀಕ್ಷೆಯಲ್ಲೂ ತೇರ್ಗಡೆ. ಯಕ್ಷಗಾನದಲ್ಲಿ ಆಸಕ್ತರಾಗಿದ್ದ ಅವರು ಹಾಡುಗಾರಿಕೆ ಹಾಗೂ ಮದ್ದಲೆ ನುಡಿಸುವುದ ಕಲಿತಿದ್ದರು. ಅಧ್ಯಾಪಕರಾಗಿದ್ದುಕೊಂಡೇ ಸ್ನಾತಕೋತ್ತರ (ಎಂ.ಎ.) ಪದವಿಗಳಿಸಿದ ಟಿ. ಕೇಶವಭಟ್ಟ ಅವರು ಪೆರ್ಲದ ಸತ್ಯನಾರಾಯಣ ಹೈಸ್ಕೂಲು, ದಕ್ಷಿಣ ಕೊಡಗಿನ ಹಾತೂರು ಹೈಯರ್ ಸೆಕೆಂಡರಿ ಶಾಲೆ, ನಂತರ ಕೊಡಗಿನ ಬೇಸಿಕ್‌ ಟ್ರೈನಿಂಗ್‌ ಕಾಲೇಜು, ಸೆಂಟ್ರಲ್‌ ಹೈಸ್ಕೂಲ್‌, ಸರಕಾರಿ ಹೈಯರ್ ಸೆಕೆಂಡರಿಶಾಲೆ, ಮೈಸೂರಿನ ಮಹಾರಾಣಿ ವುಮೆನ್ಸ್‌ ಟ್ರೈನಿಂಗ್‌ ಕಾಲೇಜ್‌, ಮಹಾರಾಜ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಮೇಷ್ಟ್ರಾಗಿದ್ದರು. ಬೆಂಗಳೂರಿನ ಎಂ.ಇ .ಎಸ್‌. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಅವರು ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

ಕವಿ- ವಿದ್ವಾಂಸರಾಗಿದ್ದ ಟಿ. ಕೇಶವ ಭಟ್ಟ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ’ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ವಿದ್ವತ್‌ ಪತ್ರಿಕೆ ‘ಕರ್ನಾಟಕ ಲೋಚನ’ದ ಪ್ರಧಾನ ಸಂಪಾದಕರಾಗಿದ್ದರು. ಕಿರಿಯರ ವಿಶ್ವಕೋಶ ‘ಜ್ಞಾನ ಗಂಗೋತ್ರಿ’ಯ ಸಂಪಾದಕ ಮಂಡಲಿಯ ಸದಸ್ಯರಾಗಿದ್ದ ಅವರು ಎಚ್‌.ಎಲ್‌. ನಾಗೇಗೌಡರ ಸಂಪಾದಕರಾಗಿದ್ದ ‘ಜಾನಪದ ಕೋಶ’ ರಚನಾ ಸಮಿತಿಯ ಸದಸ್ಯರಾಗಿದ್ದರು. ಕಾವ್ಯ ಕುರಿತ ಸತ್ತ್ವಾಲೋಕನಂ (ಚಂಪೂಕಾವ್ಯ) ಶ್ರೀ ಚನ್ನವೀರಶರಣ ಕಥಾಮೃತ (ವಾರ್ಧಕ ಷಟ್ಪದಿ); ಕನ್ನಡ ಪ್ರಾಚೀನ ಸಾಹಿತ್ಯ ಲಕ್ಷಣಗಳು-ಮರುನೋಟ, ದ.ಕ. ಜಿಲ್ಲಾ ಜಾನಪದಗೀತೆಗಳು ಎಂಬ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಲಂಕಾದಹನ, ಪಂಚವಟಿ ವಾಲಿ ಸುಗ್ರೀವ ಕಾಳಗ ಮುಂತಾದ ಯಕ್ಷಗಾನ ಪ್ರಸಂಗಗಳು; ಭಾಷಾ ದೀಪಿಕೆ, ಭಾಷಾಭಾಸ್ಕರ, ಭಾವಾರ್ಥ ವಿಸ್ತರಣ, ಕಾವ್ಯ ಪದಮಂಜರಿ ಸೇರಿದಂತೆ ಹಲವು ಶಬ್ದಕೋಶ-ಶೈಕ್ಷಣಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ದಿಲೀಪ, ಕಾರ್ತಿಕೇಯ, ವಿಶ್ವಕರ್ಮ, ಪಾರ್ವತಿ , ಗಾಂಧಾರಿ, ಗೋವಿನ ಹಾಡು ಮೊದಲಾದವು ಬಾಲ ಸಾಹಿತ್ಯ ಕೃತಿಗಳು. ಅವರ 60ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

ಅವರ ಸತ್ತ್ವಾಲೋಕನಂ ಚಂಪೂಕಾವ್ಯಕ್ಕೆ ರಾಜ್ಯ ಪ್ರಶಸ್ತಿ (1960), ‘ಹವ್ಯಕರ ಶೋಭಾನೆಗಳು’ ಸಂಕಲನಕ್ಕೆ ಯಕ್ಷಗಾನ ಹಾಗೂ ಜಾನಪದ ಅಕಾಡಮಿ ಪ್ರಶಸ್ತಿ (1986), ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ (1998), ಜಾನಪದ ತಜ್ಞ ಪ್ರಶಸ್ತಿ (2001), ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ (2003) ಗಳು  ಅವರಿಗೆ ದೊರೆತಿವೆ. ಗ್ರಂಥ ಸಂಪಾದನೆ, ನಿಘಂಟು, ಕಾವ್ಯ, ಜಾನಪದ, ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಕೇಶವಭಟ್ಟರು 2005ರ ಆಗಸ್ಟ್‌ 20ರಂದು ಅಸು ನೀಗಿದರು.

ಟಿ. ಕೇಶವ ಭಟ್ಟ

(02 Feb 1920-20 Aug 2005)