About the Author

ಡಾ.ಟಿ. ವಿ. ಚಂದ್ರಶೇಖರ್ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ (ಪಿಸಿಎಂ) ಪಾಸು ಮಾಡಿ, ಆ ನಂತರ ಸರಕಾರಿ ಕಾನೂನು ಕಾಲೇಜಿನಲ್ಲಿಎಲ್.ಎಲ್.ಬಿ ಪದವಿ ಪಡೆದರು. ತಾಯಿಯ ಪ್ರೇರಣೆ ಹಾಗೂ ಒತ್ತಾಸೆಯ ಮೇರೆಗೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದರು. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಕೆಲವು ವರ್ಷ ಕಾಲ ವೈದ್ಯರಾಗಿ, ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1970ರ ದಶಕದಲ್ಲಿ, ಡಾ. ಕಮಲಾ ಅವರನ್ನು ವಿವಾಹವಾಗಿ, ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಎಫ್‌ಎಫ್‌ಎಆರ್‌ಸಿಎಸ್‌ಐ (FFARCSI: Fellowship in Anaesthesia Royal College of Surgeons and Physicians, Dublin Republic of Ireland) ಹಾಗೂ ಡಿಎ (DA-Conjoint Board London) ಪದವಿಗಳನ್ನು ಪಡೆದು, ಬ್ರಿಟನ್‌ನಲ್ಲಿಯೇ ನೆಲೆ ನಿಂತು ಅಲ್ಲಿಯ ನಾಗರಿಕರಾದರು. ಈ ನಡುವೆ ಸೌದಿ ಅರೇಬಿಯಾದಲ್ಲಿ 12 ವರ್ಷ ಕಾಲ ಕನ್ಸಲ್ಟೆಂಟ್ ಅನಸ್ಥೆಸ್ಟ್ ಆಗಿ (Consultant Anaesthetist) ಕೆಲಸ ಮಾಡಿದರು.  ಡಯಾಲಿಸಿಸ್ ಹಾಗೂ ಅರಿವಳಿಕೆಯಲ್ಲಿ ಹೆಚ್ಚಿನ ಅನುಭವ ಗಳಿಸಿದರು. ತಮ್ಮ ಅಗಾಧ ಜ್ಞಾನವನ್ನು ಅಲ್ಲಿನ ನೂರಾರು ವೈದ್ಯರಿಗೆ ಧಾರೆ ಎರೆದರು. ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿಯೇ ಸುಮಾರು 30 ವರ್ಷ ಕಾಲ ಅಧ್ಯಾಪನ, ಸಂಶೋಧನೆಯ ಜೊತೆಗೆ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಸಾಧನೆ ಇವರದ್ದು.

ನಂತರ, ಬೆಂಗಳೂರಿಗೆ ಬಂದು ಇಲ್ಲಿಯ ನಾರಾಯಣ ಹೃದಯಾಲಯ, ರಾಮಯ್ಯ ವೈದ್ಯಕೀಯ ಕಾಲೇಜ್‌ಗಳಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು. ರಂಗಾದೊರೆ ಆಸ್ಪತ್ರೆ, ಕಾವೇರಿ ಮೆಡಿಕಲ್ ಸೆಂಟರ್ ಆಸ್ಪತ್ರೆಗಳನ್ನು ಪ್ರಾರಂಭಿಸಿ ಪುನಃಶ್ಚೇತನಗೊಳಿಸಿದರು. ಕರ್ನಾಟಕ ಬಾರ್ ಅಸೋಸಿಯೇಷನ್ (ಕಾನೂನು) ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಸಕ್ರಿಯ ಸದಸ್ಯರಾಗಿದ್ದಾರೆ. ವಿದೇಶದಲ್ಲೇ ಇವರು ಹೆಚ್ಚು ಕಾಲ ಇದ್ದರೂ ತಮ್ಮ ತಾಯ್ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದವರ ಜೊತೆ ನಿಕಟವಾದ ಸಂಬಂಧವನ್ನು ಇಟ್ಟುಕೊಂಡಿದ್ದರು. 1981ರಲ್ಲಿ ನಾಟಿಂಗ್‌ಹ್ಯಾಮ್ (ಯುಕೆ) ಕನ್ನಡ ಸಂಘ ಪ್ರಾರಂಭವಾದಾಗ, ಹಿರಿಯ ಸಾಹಿತಿ ಡಾ.ಎಸ್‌ಎಲ್ ಭೈರಪ್ಪ ಅವರನ್ನುಉದ್ಘಾಟಕಾರಗಿ ಆಮಂತ್ರಿಸಿದ್ದರು. ಯುಕೆ ದೇಶದ ಕನ್ನಡ ಸಂಘಗಳೊಂದಿಗೆ ಇಂದಿಗೂ ನಿಕಟ ಸಂಕರ್ಪ ಹೊಂದಿದ್ದಾರೆ.  ವೃತ್ತಿಯ ಹೊರತಾಗಿ ಸಾಹಿತ್ಯದ ಓದು, ಬರವಣಿಗೆ, ಸಂಗೀತ ಇವರ ನೆಚ್ಚಿನ ಇತರ ಆಸಕ್ತಿಗಳು. ತಮ್ಮ ಜೀವನದ ಅನುಭವ ಕಥನಗಳನ್ನು ಚಿಂತನಶೀಲ ನುಡಿಗಳನ್ನಾಗಿಸಿ `ವೈದ್ಯ ಅರಿತ ಬದುಕಿನ ಸತ್ಯಗಳು’ ಶೀರ್ಷಿಕೆಯಡಿ ಕೃತಿ ರಚಿಸಿದ್ದಾರೆ. 

ಟಿ.ವಿ. ಚಂದ್ರಶೇಖರ್