About the Author

ಡಾ. ವಿನಾಯಕ ರಾ. ಕಮತದ ಕವಿ, ನಾಟಕಕಾರ ಹಾಗೂ ಕಲಾವಿದರು. ಹುಟ್ಟದ್ದು 1980 ಸಪ್ಟೆಂಬರ್‌ 29ರಂದು ಗದಗ ಜಿಲ್ಲೆ ಗದಗ ತಾಲ್ಲೂಕಿನ ಬೆಂತೂರಿನಲ್ಲಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲ ಎಂ.ಇಡಿ. ಪದವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮತ್ತು ಡಾ. ಎಸ್. ಎನ್ ವೆಂಕಟಾಪೂರ ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ "ಕನ್ನಡ ಗಜಲ್‌ಗಳಲ್ಲಿ ವಸ್ತು ಮತ್ತು ಅಭಿವ್ಯಕ್ತಿ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪದವಿ ಗಳಿಸಿದ್ದಾರೆ.

2005 ರಿಂದ 2017 ವರೆಗೆ ತೋಂಟದಾರ್ಯ ವಿದ್ಯಾಪೀಠದ ಬಿ.ಇಡಿ.ಮತ್ತು ಡಿ.ಇಡಿ. ಕಾಲೇಜುಗಳ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಾವಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ "ಇನ್ನರ್ ವೀಲ್" ಸಂಸ್ಥೆಯವರಿಂದ "ಉತ್ತಮ ಶಿಕ್ಷಕ" ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಸರಕಾರಿ ಆದರ್ಶ ವಿದ್ಯಾಲಯ ಇಟಗಿ, ತಾ. ರೋಣ ಜಿ. ಗದಗದಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೇ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡ ಇವರ ಕವಿತೆ, ಕಥೆ, ನಾಟಕಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ಸುಧಾ, ತುಷಾರ, ನೈರುತ್ಯ, ಗುಲ್ಬಗ್ಧ ಗೂಡು, ನಯನ,ವಿಭೂತಿ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಕೃತಿಗಳು: ಒಡಲ ಹಕ್ಕಿಯ ಹಾಡು(ಶಾಯಿರಿ ಮತ್ತು ಕವನಗಳು-2002), ಒಂದೇ ಹನಿ ಪ್ರೀತಿಗೆ (ಭಾವಗೀತೆಗಳು- 2010), ಬೆವರಿಗೂ ಬೆಲೆಯಿಲ್ಲದ ಊರಲ್ಲಿ(ಗಜಲ್ ಗಳು-2014), ಚಂದಮಾಮನ ಮಗಳು( ಮಕ್ಕಳ ಪದ್ಯಗಳು - 2015), ಬಳ್ಳ ಹಾಡು ಹಳ್ಳಿ ಹಾಡು( ಪಠ್ಯ ಪೂರಕ ಪದ್ಯಗಳು- 2016), ಅಪ್ಪ ಅಮ್ಮ ಬೈತಾರೆ ( ಮಕ್ಕಳ ಪದ್ಯಗಳು - 2017), ಬೆಳ್ಳಕ್ಕಿ ಕೊಡ ( ಮಕ್ಕಳ ನಾಟಕಗಳು- 2018), ಕಣ್ಣಿನ ಪಾಟಿ ( ಮಕ್ಕಳ ಕಿರು ಪದ್ಯಗಳು- 2018), ಅಜ್ಜಿ ಅಂದ್ರ ಹೆಂಗಿರ್ತಾಳ (ಮಕ್ಕಳ ಪದ್ಯಗಳು- 2021)

'ಬೆಳ್ಳಕ್ಕಿ ಕೊಡೆ' ನಾಟಕ ಸಂಕಲನಕ್ಕೆ 2018 ನೇ ಸಾಲನ 'ಶ್ರೀ ಜಿ.ಅ ಹೊಂಬಳ ಮಕ್ಕಳ ಸಾಹಿತ್ಯ: ರಾಜ್ಯ ಪ್ರಶಸ್ತಿ ಮತ್ತು 2018ನೇ ಸಾಲನ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನಾಟಕ ವಿಭಾಗದಲ್ಲಿ 'ಬೆಳ್ಳಕ್ಕಿ ಕೊಡೆ' ಕೃತಿಗೆ 'ಮಕ್ಕಳ ಚಂದಿರ ಪುರಸ್ಕಾರ ಲಭಿಸಿದೆ.

ವಿನಾಯಕ ರಾ. ಕಮತದ

(29 Sep 1980)