About the Author

ತುಳುನಾಡಿನ ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಹುಟ್ಟಿದ  ಡಾ. ಕೆ. ವಿಶ್ವನಾಥ ಕಾರ್ನಾಡರು (1940) ಓದಿಗೆ ಮತ್ತು ಉದ್ಯೋಗಕ್ಕಾಗಿ ಮುಂಬೈ ನಗರ ಸೇರಿದರು.  ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ ಮೂರು ವಿಷಯಗಳಲ್ಲಿ ಎಂ.ಎ. ಮಾಡಿ, ಎಲ್. ಎಲ್.ಬಿ, ಬಿ.ಎಡ್.ಪದವಿ ಹಾಗೂ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಮುಂಬೈಯ ಮಹರ್ಷಿ ದಯಾನಂದ ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ, ಎಂ.ಫಿಲ್ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. 'ತುಳುವರ ಮುಂಬಯಿ ವಲಸೆ-ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನಾ ಕೃತಿಯೂ ಸೇರಿದಂತೆ ಒಂಬತ್ತು ಕಥಾ ಸಂಕಲನಗಳು, ಮತ್ತು ಕವನ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಲೇಖನ ಸಂಗ್ರಹಗಳು, ಹಿಂದಿ ಹಾಗೂ ಮರಾಠಿಗಳಿಂದ ಅನುವಾದಿಸಿದ ಆರು ಕಾದಂಬರಿಗಳು ಸೇರಿ ಇಪ್ಪತ್ತಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 'ಸುವರ್ಣ ಕರ್ನಾಟಕ ಪುಸ್ತಕ ಬಹುಮಾನ, ಕರ್ನಾಟಕ ಜಾನಪದ ಸಾಹಿತ್ಯ ಪ್ರಶಸ್ತಿ, ವಚನಶ್ರೀ ರಾಷ್ಟ್ರೀಯ ಪುರಸ್ಕಾರ, ಶ್ರೀ ನಾರಾಯಣಗುರು ಸಾಹಿತ್ಯಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಸಾಹಿತ್ಯ ಅಕಾಡೆಮಿಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುವ ಅವರು ಮುಂಬಯಿಯನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದಾರೆ. ಪ್ರಾಧ್ಯಾಪಕ, ಸೃಜನಶೀಲ ಸಾಹಿತಿ, ಶಿಕ್ಷಣತಜ್ಞ ಕಾರ್ನಾಡರು ಹೊರನಾಡ ಕನ್ನಡಿಗರಾಗಿದ್ದೂ ಕನ್ನಡ ಭಾಷೆ, ಸಾಹಿತ್ಯದ ಸೇವೆಗಾಗಿ ಕನ್ನಡ ನಾಡಿನಲ್ಲಿ ಇರುವವರಷ್ಟೇ ಸಮರ್ಥವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ವಿಶ್ವನಾಥ ಕಾರ್ನಾಡ್