About the Author

ವಿಶ್ವಾರಾಧ್ಯ ಸತ್ಯಂಪೇಟೆ ಮೂಲತಃ ಯಾದಗಿರಿ ಜಿಲ್ಲೆಯ (08-06-1969) ಸುರಪುರ ತಾಲೂಕಿನ ಸತ್ಯಂಪೇಟೆಯವರು. ತಂದೆ ಹಿರಿಯ ಲೇಖಕ, ಚಿಂತಕ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ, ತಾಯಿ- ಶಾಂತಮ್ಮ ಸತ್ಯಂಪೇಟೆ. ಬಿ.ಎ ಮುಗಿಸಿ, ಡಿಪ್ಲೋಮಾ ಇನ್ ಜರ್ನಲಿಸಂ ಪೂರ್ಣಗೊಳಿಸಿದ್ದಾರೆ.  ಹವ್ಯಾಸಿ ಪತ್ರಕರ್ತರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಹಾಗೂ ಸತ್ಯಂಪೇಟೆಯ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ. ಈ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಬಸವ ಬೆಳಕು ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ‘ಮನೆಯಲ್ಲಿ ಮಹಾಮನೆ’ ಶೀರ್ಷಿಕೆಯಡಿ ಬಸವ ತತ್ವ ಪ್ರಚಾರ-ಪ್ರಸಾರವೇ ಜೀವಾಳವಾಗಿರಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. 

ಕೃತಿಗಳು:  ಸಾಹಿತ್ಯ ಕೃಷಿಯೂ ಅವರ ಇಷ್ಟದ ಹವ್ಯಾಸ. ಚಿತ್ತ ಚೋರರು, ಬಸವಣ್ಣ ಮತ್ತು ಲೋಹಿಯಾ, ನಿನಗೆ ಕೇಡಿಲ್ಲವಾಗಿ, ಹರಕೆಯ ಕುರಿಗಳು, ಧರ್ಮ ಮತ್ತು ದಗಲ್ಬಾಜಿಗಳು, ಮಠದೊಳಗಣ ಬಾವುಗಗಳು, ಎನ್ನನದ್ದಿ ನೀನೆದ್ದು ಹೋಗು, ಅಜ್ಞಾನದ ಕೇಡು, ಕಂಗಳ ಮುಂದಿನ ಬೆಳಕು, ಮಠದ ಗೂಳಿಗಳು, ದೇವರ ಹುಡುಕುತ್ತ, ಕಾವಿಯೊಳಗಿನ ಕೆಂಡ, ಕಲ್ಲದೇವರ ಮಾಡಿ, ಅಧರಕ್ಕೆ ಕಹಿ, ಉದರಕ್ಕೆ ಸಿಹಿ, ಮುಗಿಲ ಮರೆಯ ಮಿಂಚು, ಅಪ್ಪನನ್ನು ಅರಸುತ್ತ, ಪ್ರಳಯಾಂತಕರು, ಕಲ್ಯಾಣದ ಪ್ರಣತೆಯಲ್ಲಿ, ಬಸವಮಾರ್ಗ, ಅಪ್ಪನ ನೆನಪುಗಳು ಅವರ ಪ್ರಕಟಿತ ಕೃತಿಗಳು.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಇಳಕಲ್ಲಿನ ಚಿತ್ತರಗಿ ಮಠದಿಂದ ಬಸವ ಕಾರುಣ್ಯ ಪ್ರಶಸ್ತಿ, ಚಿತ್ರದುರ್ಗದ ಮುರುಘಾಮಠದ ಬಸವ ಕೇಂದ್ರದಿಂದ ಶರಣ ದಂಪತಿಗಳು ಪ್ರಶಸ್ತಿ, ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ‘ಮಾನವ ಬಂಧುತ್ವ ’ಪ್ರಶಸ್ತಿ, ದಲಿತ ಸಂಘರ್ಷ ಸಮಿತಿಯಿಂದ ‘ಪೆರಿಯಾರ’ ಪ್ರಶಸ್ತಿ,ಬಸವ ಜ್ಯೋತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ,-ಗೌರವಗಳು ಲಭಿಸಿವೆ.

ವಿಶ್ವಾರಾಧ್ಯ ಸತ್ಯಂಪೇಟೆ

(08 Jun 1969)