
‘ವಿಶ್ವ ಭ್ರಾತೃತ್ವದ ಸೂಫಿ ದೂಧಪೀರಾಂ’ ಕೃತಿಯನ್ನು ಎ.ಎಸ್ ಮಕಾನದಾರ ಮತ್ತು ಎಂ.ಆಯ್.ಕಣಕೆ ಅವರು ಸಂಪಾದಿಸಿದ್ಧಾರೆ. ಪ್ರೊ.ಚಂದ್ರಶೇಖರ ಪಾಟೀಲ ಈ ಕೃತಿಯ ಕುರಿತು ಹೀಗೆ ಹೇಳಿದ್ಧಾರೆ; ನಮ್ಮ 'ಧರ್ಮ'ಗಳ ಇತಿಹಾಸವನ್ನು ನೋಡಿದಾಗ ಒಂದು ಪ್ರಕ್ರಿಯೆ 'ಸಹಜ' ವೆಂಬಂತೆ ಕಾಣುತ್ತದೆ. ಒಂದು ಕಾಲಘಟ್ಟದಲ್ಲಿ ಆಂತರಿಕ ಒತ್ತಡವೋ - ಅಂತೂ ಮೌಲ್ಯಗಳ ಮೊತ್ತವೊಂದು ಚಾಲ್ತಿಗೆ ಬರುತ್ತದೆ. ಅದಕ್ಕೆ ಒಬ್ಬನೇ ಒಬ್ಬ ವ್ಯಕ್ತಿ ಕಾರಣವಾಗಿರಬಹುದು. ಒಮ್ಮೊಮ್ಮೆ ಈ ಮೌಲ್ಯಗಳು ಸಾಮಾಜಿಕ ಮನ್ನಣೆ ಪಡೆದು, ಕಾಲಾಂತರದಲ್ಲಿ ವ್ಯವಸ್ಥಿತ ಚೌಕಟ್ಟು ರೂಪುಗೊಂಡು, ಪ್ರಭುತ್ವದ ಅಧಿಕಾರ ಮುದ್ರೆಯನ್ನೂ ಪಡೆದು, 'ಧರ್ಮ'ದ ಹೆಸರಿನಲ್ಲಿ ಸಮಷ್ಟಿ ಬದುಕನ್ನು ನಿಯಂತ್ರಿಸುತ್ತವೆ. ಬರಬರುತ್ತ ಮೂಲಾಧಾರದ ಮೌಲ್ಯಗಳು ಚಲನಶೀಲತೆಯನ್ನು ಕಳೆದುಕೊಂಡು, 'ಜಡ'ವಾಗಿ, ಕೆಲವೇ ಕೆಲವು ವರ್ಗಗಳ ಸೊತ್ತಾಗಿ, ಒಟ್ಟಾರೆ ಶೋಷಣೆಯ ಅಸ್ತ್ರಗಳಾಗಿ ಪರಿಣಮಿಸುವ ಸಂಭವವಿದೆ. ಆಗ ಧರ್ಮದ ಒಳಗಿನಿಂದಲೇ ಬಂಡಾಯ ಪ್ರಾರಂಭವಾಗಿ ಆ ಧರ್ಮವೇ ಹೋಳಾಗಬಹುದು ಅಥವಾ ಭಿನ್ನಮತೀಯರು ಬೇರೆ ಹಾದಿಯನ್ನೇ ಹಿಡಿಯಬಹುದು. ಇಂಥ ಅನೇಕ ದೃಷ್ಟಾಂತಗಳು ಚರಿತ್ರೆ ಯಲ್ಲಿ ಇವೆ. ಒಮ್ಮೊಮ್ಮೆ 'ಬಂಡಾಯ' ದ ಮನೋಧರ್ಮಕ್ಕೆ ಪರ್ಯಾಯವಾಗಿ ಎಲ್ಲ ಧರ್ಮಗಳ 'ಒಳ್ಳೆಯ' ಅಂಶಗಳನ್ನು ಕಲೆ ಹಾಕಿ ಅವಕ್ಕೊಂದು ವಿಶಿಷ್ಟ ಸ್ವರೂಪ ಕೊಡುವ ಪ್ರಯತ್ನಗಳೂ ನಡೆದಿವೆ. ಇಂಡಿಯಾದಂಥ ಬಹುಮುಖೀ ಸಂಸ್ಕೃತಿಯ ದೇಶದಲ್ಲಿ ಇಂಥ ಧರ್ಮ ಸಮನ್ವಯದ ಪ್ರಯೋಗಗಳು ಹೆಚ್ಚು ಯಶಸ್ವಿಯಾಗಲು ಸಾಧ್ಯ ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
©2025 Book Brahma Private Limited.