About the Author

’ಆನಂದ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅಜ್ಜಂಪುರ ಸೀತಾರಾಂ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮಾಸ್ತಿಯವರ ಸಣ್ಣಕಥಾ ಪರಂಪರೆಯಲ್ಲಿ ಆನಂದರು ಹೆಜ್ಜೆಗುರುತು ಮೂಡಿಸುವ ಬರವಣಿಗೆ. ಇವರು ಜನಿಸಿದ್ದು 1902 ಆಗಸ್ಟ್‌ 18ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಜನಿಸಿದರು.  ಸೀತಾರಾಮ್ ಅವರ ಪ್ರಾರಂಭಿಕ ಶಿಕ್ಷಣ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ ನಡೆಯಿತು. ಹೈಸ್ಕೂಲು ಹಾಗೂ ಜ್ಯೂನಿಯರ್ ಕಾಲೇಜು ವಿದ್ಯಾಭ್ಯಾಸ ಶಿವಮೊಗ್ಗದಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್‌ಸಿ ಪದವಿ ಗಳಿಸಿದರು. ಕೈಲಾಸಂರವರು ಶಿವಮೊಗ್ಗದಲ್ಲಿದ್ದಾಗ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಹೈಸ್ಕೂಲಿನಲ್ಲಿ ಗುರುಗಳಾಗಿ ದೊರೆತಿದ್ದ ಎಂ.ಆರ್.ಶ್ರೀ ಮತ್ತು ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು ಸಾಹಿತ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರೆ ಸೆಂಟ್ರಲ್‌ ಕಾಲೇಜಿನಲ್ಲಿ ಟಿ.ಎಸ್‌. ವೆಂಕಣ್ಣಯ್ಯನವರು ಮತ್ತಷ್ಟು ಪ್ರೋತ್ಸಾಹ ನೀಡಿದರು. ಮಾಸ್ತಿಯವರ ಕಥೆಗಳಿಂದ ಆಕರ್ಷಿತರಾಗಿದ್ದು ಚರ್ಚಿಸಲು ಸಿಗುತ್ತಿದ್ದ ಸ್ನೇಹಿತರುಗಳೆಂದರೆ ನಿಟ್ಟೂರು ಶ್ರೀನಿವಾಸರಾವ್‌, ಡಾ. ಶಿವರಾಂ, ಕೆ. ಗೋಪಾಲಕೃಷ್ಣರಾವ್‌ ಮುಂತಾದವರು.

ಆನಂದರು ಜಪಾನ್‌, ಅಮೆರಿಕ, ಫ್ರೆಂಚ್‌ ಭಾಷೆಗಳಿಂದ ಮೂರು ನಾಟಕಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ, ಸಡ್‌ಸೂಕಿ (ಜಪಾನ್)ಯವರ ‘ಬರ್ನಿಂಗ್‌ ಹರ್ ಅಲೈವ್‌’ ನಾಟಕವು ‘ದಹನಚಿತ್ರ’ವಾಗಿ, ಹಾಲ್‌ವರ್ದೀಹಾಲ್‌ (ಅಮೆರಿಕ )ರವರ ದ ವೇಲಿಯಂಟ್‌ ನಾಟಕವು ‘ವೀರಯೋಧ’ನಾಗಿ, ಮೊಪಾಸನ (ಫ್ರೆಂಚ್‌) ಎ ಕ್ರೈಸಿಸ್‌ ನಾಟಕವು ‘ಸುಶೀವಿಜಯ’ ಎಂಬುದಾಗಿಯು ಅನುವಾದಗೊಂಡಿವೆ. ಇದಲ್ಲದೆ ಇವರು ಅನುವಾದಿಸಿದ ವಿದೇಶಿ ಲೇಖಕರ ಎಂಟು ಕಾದಂಬರಿಗಳೆಂದರೆ ಲಿಯೋಟಾಲ್‌ಸ್ಟಾಯ್‌ರವರ ‘ಟಾಲ್‌ಸ್ಟಾಯ್‌ ಆತ್ಮಕತೆ’, ಟ್ರೆಷರ್ ಐಲೆಂಡ್‌ ‘ಸಿರಿದ್ವೀಪ’ವಾಗಿ, ಅಲೆಕ್ಸಿಟಾಲ‌ಸ್ಟಾಯ್‌ರ ಆರ್ಡಿಯಲ್‌ ಕಾದಂಬರಿಯು ‘ಉಗ್ರಪರೀಕ್ಷೆ’ಯಾಗಿ, ಸರ್ ವಾಲ್ಟರ್ ಸ್ಕಾಟ್‌ನ ಟಾಲಿಸ್‌ಮನ್‌- ‘ರಕ್ಷಾಕವಚ’ವಾಗಿ, ವಿಗ್ಡೊರೋವನ ದ ಡೈರಿ ಆಫ್‌ ಎ ಸ್ಕೂಲ್‌ ಟೀಚರ್ – ‘ಶಾಲಾ ಉಪಾಧ್ಯಾಯಿನಿಯೊಬ್ಬಳ ದಿನಚರಿ’ಯಾಗಿ, ಡೇನಿಯಲ್‌ ಡಿಪೊನ ರಾಬಿನ್‌ ಸನ್‌ಕ್ರುಸೋ – ‘ರಾಬಿನ್‌ ಸನ್‌ ಕ್ರುಸೋ ಕಥೆ’ ಎಂದು, ಸ್ಟೀವನ್‌ಸನ್‌ನ ಸ್ಟ್ರೇಂಜ್‌ ಕೇಸ್‌ ಆಫ್‌ ಡಾ. ಜೆಕಿಲ್‌ ಅಂಡ್‌ ಮಿ.ಹೈಡ್‌ ಕಾದಂಬರಿಯು ‘ಪುರುಷಾಮೃಗ’ವಾಗಿ ಅನುವಾದಗೊಂಡಿವೆ.

ಆನಂದರು ಮಕ್ಕಳಿಗಾಗಿ ಭಾಷಾಂತರಿಸಿದ ಕಥೆಗಳು ‘ಈ ಸೋಪನ ನೀತಿಕಥೆಗಳು’. ಇವರು ಬರೆದ ಮತ್ತೆರಡು ಕೃತಿಗಳೆಂದರೆ ಗದ್ಯಗೀತಾತ್ಮಕ ವಚನ ಸಂಗ್ರಹ ‘ಪಕ್ಷಿಗಾನ’ ಮತ್ತು ಪ್ರಬಂಧ ಸಂಕಲನ ‘ಆನಂದ ಲಹರಿ’. ಆನಂದರಿಗೆ ಮುದ್ದಣ ಸ್ಮಾರಕ ಸಣ್ಣಕಥಾ ಸ್ಪರ್ಧೆಯಲ್ಲಿ ‘ಸುವರ್ಣಪದಕ’ವಲ್ಲದೆ ಬೆಂಗಳೂರು, ಮೈಸೂರು ಕಾಲೇಜುಗಳಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಮೈಸೂರಿನ ಸದ್ವಿದ್ಯಾಶಾಲಾ ಸಭಾಂಗಣದಲ್ಲಿ 1959ರಲ್ಲಿ ಆನಂದರನ್ನು ಸನ್ಮಾನಿಸಿದಾಗ ಎಸ್‌.ವಿ. ಪರಮೇಶ್ವರಭಟ್ಟ, ಡಿ.ಎಲ್‌.ಎನ್., ರಾ.ನ. ಹಬ್ಬು, ಜಿ. ವೆಂಕಟಸುಬ್ಬಯ್ಯ, ತ.ಸು.ಶಾಮರಾವ್, ಬಿ. ಶಿವಮೂರ್ತಿಶಾಸ್ತ್ರಿ, ಬಿ.ಎಚ್. ಶ್ರೀಧರ್ ಮುಂತಾದ ಸಾಹಿತ್ಯ ದಿಗ್ಗಜರೆಲ್ಲರೂ ಶುಭ ಕೋರಿದ್ದರು. ಆನಂದರು 1963ರ ನವಂಬರ್ 17ರಂದು ದೀಪಾವಳಿ ಪಾಡ್ಯದ ದಿನ ಈ ಲೋಕದ ಬದುಕಿಗೆ ವಿದಾಯ ಹೇಳಿದರು. ಕೃತಿಗಳು: ಆನಂದರು ಮೊಪಾಸನ ಭ್ರಮನಿರಸನ (ವಾಸ್‌ ಇಟ್‌ ಎ ಡ್ರೀಮ್‌), ಏಕಾಂತತೆ (ಸಾಲಿಟ್ಯೂಡ್‌), ಔದುಂಬರಾಣಿ ಪುಷ್ಟಾಣಿ (ದಲೋಗ್‌), ಅರ್ಜುನಲಾಲನ ಪರಾಭಾವ (ದ ಆರ್ಟಿಸ್ಟ್‌ ) ಮುಂತಾದವುಗಳ ಜೊತೆಗೆ ಲೂಯಿ ಕೌಪೆರಸ್‌ನ ಕೆಲಕಥೆಗಳನ್ನು ಸ್ವಪ್ನಜೀವಿ, ರೂಪಾರಾಧನೆ, ರಿಪೇರಿ ಮಾಯಣ್ಣ ಕಥೆಗಳಾಗಿ ರೂಪಾಂತರಗೊಳಿಸಿದ್ದಾರೆ. ವಿ.ಎಸ್‌. ಗುರ್ಜಾರ್ ಅವರ ಮರಾಠಿ ಕತೆ ‘ಚಪಲಾ’ದ ಇಂಗ್ಲಿಷ್‌ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ. ಆನಂದರ ಕೆಲ ಕಥೆಗಳು ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗೆ ಅನುವಾದಗೊಂಡಿವೆ. ‘ನಾನು ಕೊಂದ ಹುಡುಗಿ’ ಕಥೆಯು ‘ಲಡ್ಕಿ ಜಿಸ್‌ಕಿ ಮೈನೆ ಹತ್ಯಾಕೀ’ ಎಂದು ಹಿಂದಿ ಭಾಷೆಗೂ; ರಾಧೆಯ ಕ್ಷಮೆ, ಮಾಟಗಾತಿ, ಕೊನೇ ಎಂಟಾಣೆ ಮುಂತಾದ ಕಥೆಗಳು ಇಂಗ್ಲಿಷ್‌ ಭಾಷೆಗೂ ಅನುವಾದಗೊಂಡಿವೆ. ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಕಥೆಗಳು ಭವತಿ ಭಿಕ್ಷಾಂದೇಹಿ, ಚಂದ್ರಗ್ರಹಣ, ಜೋಯಿಸರ ಚೌಡಿ, ಮಾಟಗಾತಿ, ಸ್ವಪ್ನಜೀವಿ, ಸಂಸಾರಶಿಲ್ಪ, ಶಿಲ್ಪಸಂಕುಲ ಎಂಬ ಏಳು ಕಥಾ ಸಂಕಲನಗಳಲ್ಲಿ ಸೇರಿವೆ.

 

ಆನಂದ (ಅಜ್ಜಂಪುರ ಸೀತಾರಾಂ)

(18 Aug 1902-17 Nov 1963)