About the Author

ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ-ಹೀಗೆ ವೈವಿಧ್ಯಮಯ ಬರೆಹ ವ್ಯವಸಾಯದಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿರುವ ಬಿ. ಸಿದ್ಧಲಿಂಗಸ್ವಾಮಿ (ಬಿ.ಎಸ್‌.ಸ್ವಾಮಿ) ಅವರು ಹುಟ್ಟಿದ್ದು 1942ರ ಸೆಪ್ಟಂಬರ್‌ 8 ರಂದು. ಊರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನ ಹಳ್ಳಿ. ತಂದೆ ವಿ. ಬಸವಲಿಂಗಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು, ತಾಯಿ ಶಿವನಾಗಮ್ಮ. ಪ್ರಾರಂಭಿಕ ಶಿಕ್ಷಣ ಮಧುವನಹಳ್ಳಿ, ಕೊಳ್ಳೇಗಾಲ. ಮೈಸೂರಿನ ಸೇಂಟ್‌ ಫಿಲೋಮಿನ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಮೈಸೂರು, ಚಾಮರಾಜನಗರ ಸುತ್ತಮುತ್ತಲ ಕಡೆಗಳಲ್ಲಿ ಹಬ್ಬಿರುವ ಪವಾಡ ಸದೃಶ ವಿಚಾರಗಳು, ಐತಿಹ್ಯ, ಜನರ ನಂಬಿಕೆ, ಭಕ್ತಿಯ ಪರಾಕಾಷ್ಠೆ ಮುಂತಾದವುಗಳ ರಸವತ್ತಾದ ವಿಶ್ಲೇಷಣೆಯ ಮಲೆಮಹದೇಶ್ವರ: ಒಂದು ಅಧ್ಯಯನ ಎಂಬ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಪಡೆದರು. 

ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧನಾಕ್ಷೇತ್ರ. ಐದು ವರ್ಷಗಳ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ನಂತರ ಕಾರ್ಯಕ್ರಮ ನಿರ್ವಾಹಕ, ಅಧಿಕಾರಿಯಾಗಿ, ಗುಲ್ಬರ್ಗ, ಬೆಂಗಳೂರು, ಮಂಗಳೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು.

ಬಹುಮುಖ ವ್ಯಕ್ತಿತ್ವದ ಸ್ವಾಮಿಯವರ ಸಾಹಿತ್ಯಕ್ರಿಯೆ ಪ್ರಾರಂಭವಾದುದು ಕವನ ರಚನೆಗಳಿಂದ. ಆಗಾಗ್ಗೆ ಬರೆದ ಕವನಗಳನ್ನೂ ಸಂಕಲಿಸಿ ಪ್ರಕಟಿಸಿದ ಪ್ರಥಮ ಕವನ ಸಂಕಲನ ‘ಅಮೃತ’. ನಂತರ ಮುಂಬೆಳಕು, ಲಾಸ್ಯ-ತಾಂಡವ, ಇಂಚರ, ಕಾವ್ಯಗಂಗಾ, ಹೃದಯ ಹಾಡಿತು ಮುಂತಾದ ಕವನ ಸಂಕಲನಗಳ ಜೊತೆಗೆ ‘ಕಲಿಭಾರತ ಎಂಬ ಮಹಾಕಾವ್ಯ’ಬರೆದರು. ಜೀವನ ಚರಿತ್ರೆ, ಶರಣ ಸಾಹಿತ್ಯ, ಜೈನ ಸಾಹಿತ್ಯ, ಪ್ರವಾಸ ಸಾಹಿತ್ಯ, ಜಾನಪದ, ಮಕ್ಕಳ ಸಾಹಿತ್ಯದ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ. ಪ್ರೇಮ ಪರಾಗ, ಪ್ರೇಮಾಂಕುರ, ಅಮರಪ್ರೇಮ, ಮಧುಮತಿ, ರೂಪಸಿ ಮುಂತಾದ 32 ಕಾದಂಬರಿಗಳು; 1998ರಲ್ಲಿ ಪ್ರಕಟವಾದ ಜೀವನ ಚಿತ್ರಗಳ ಕೃತಿಯಲ್ಲಿ  65 ಮಹನೀಯರ ಬದುಕು-ಸಾಧನೆಯ ಬಗ್ಗೆ ಬರೆದ ಲೇಖನಗಳು; ಶೈವ. ವೀರಶೈವ ಕವಿಗಳನ್ನು ಕಾದಂಬರಿ ರೂಪದಲ್ಲಿ ಪರಿಚಯಿಸಿರುವ ಷಡಕ್ಷರದೇವ , ಮಲಹಣದೇವ, ಮತ್ತು ಮಹಾಕವಿ ಹರಿಹರ ಕೃತಿಗಳು; ಭಾರತ ಪ್ರವಾಸ ಹಾಗೂ ಅಮೆರಿಕ ಪ್ರವಾಸದ ‘ಅಮರ ನೆನಪು ಅಮೆರಿಕ’ ಪ್ರವಾಸ ಸಾಹಿತ್ಯ ಕೃತಿಗಳಲ್ಲದೆ ನಾಟಕ, ಹಾಸ್ಯ ಸಾಹಿತ್ಯದಲ್ಲೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕಾರಂಜಿ, ಪ್ರಾಸ-ತ್ರಾಸ, ಗುಟುಕು, ಮಿಂಚು, ಹಾಸ್ಯತರಂಗ ಪ್ರಮುಖ ಹಾಸ್ಯ ಕೃತಿಗಳಾದರೆ ಬಾನುಲಿ ನಾಟಕ, ರಂಗನಾಟಕ, ರೇಡಿಯೋ ರೂಪಕಗಳು ಮುಂತಾದ ಹಲವಾರು ಪ್ರಕಾರಗಳಲ್ಲೂ ನಾಟಕಗಳನ್ನೂ ರಚಿಸಿದ್ದಾರೆ. 

ಮಾದೇಶ್ವರ ಮಾಹತ್ಮ್ಯೆ-ಇದು ಅವರ ಆಳ ಚಿಂತನೆಯ  ವಸ್ತುವಾಗಿದ್ದು ತಮ್ಮ ಪ್ರಬಂಧ, ನಾಟಕ, ಲೇಖನಗಳಲ್ಲಿ ಧಾರಾಳವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಹಳ್ಳಿಯಾದರೇನು ಶಿವ, ಬಿಟ್ಟಿನೆಂದರೂ ಬಿಡದೀಮಾಯೆ, ನಂದನವನ, ಮೊದಲಾದವುಗಳು ರಂಗದ ಮೇಲೆ ಅಭಿನಯಿಸಲ್ಪಡಬಹುದಾದ ಪೂರ್ಣ ಪ್ರಮಾಣದ ನಾಟಕಗಳನ್ನು ರಚಿಸಿದ್ದಾರೆ.

ಚಲನಚಿತ್ರ ನಿರ್ಮಾಣ ಮಾಡಬೇಕು, ನಿರ್ದೇಶಿಸಬೇಕು ಎಂದು ಮದರಾಸಿಗೆ ಹೋಗಿ ಅಲ್ಲಿಯ ಸಿನಿಮಾರಂಗದ ರಾಜಕಾರಣ ನೋಡಿ ಹಿಂದಿರುಗಿದರು. ಆದರೂ ಈ ಸಂದರ್ಭದಲ್ಲಿ ‘ಅಪರಾಜಿತ’ ಚಲನಚಿತ್ರಕ್ಕೆ ಗೀತೆಗಳನ್ನು, ‘ಗಾಜಿನಮನೆ’ ಚಲನಚಿತ್ರಕ್ಕೆ ಸಂಭಾಷಣೆಯನ್ನು, ‘ಮಾದೇಶ್ವರ’ ರೂಪಕ ಚಿತ್ರಕ್ಕೆ ನಿರೂಪಣಾ ಸಾಹಿತ್ಯವನ್ನೂ ಒದಗಿಸಿದ್ದಾರೆ. ಕಥೆ, ಕಾದಂಬರಿ, ಬಾನುಲಿ ನಾಟಕ, ರೂಪಾಂತರ, ವಿಮರ್ಶೆ,  ಪ್ರವಾಸ ಸಾಹಿತ್ಯ, ಗ್ರಂಥ ಸಂಪಾದನೆ , ಜಾನಪದ ಸಾಹಿತ್ಯ , ಮಕ್ಕಳ ಸಾಹಿತ್ಯ-ಹೀಗೆ ಸ್ವಾಮಿಯವರ ಸಾಹಿತ್ಯದ ಹರವು. ‘ಬೆಂಕಿಯಲ್ಲಿ ಅರಳಿದ ಹೂವು’ -ಇವರ ಆತ್ಮಕಥೆ. 2006 ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಮಧುವ್ರತ’ . ಸಾಹಿತ್ಯದ ಎಲ್ಲ ಪ್ರಕಾರಗಳೂ ಸೇರಿ ಸುಮಾರು 200 ಕ್ಕೂ ಹೆಚ್ಚು ಕೃತಿ ರಚಿಸಿದ್ದು, ಜಾನಪದ ಯಕ್ಷಗಾನ ಅಕಾಡೆಮಿಯಿಂದ ‘ಜಾನಪದತಜ್ಞ’ ಪ್ರಶಸ್ತಿ, ಕವಿಚಕ್ರೇಶ್ವರ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ಜೈನ ಸಾಹಿತ್ಯದ ಕೊಡುಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮುದ್ದಣ ರತ್ನಾಕರವರ್ಣಿ ಪ್ರಶಸ್ತಿ ಗೊರೂರು ಪ್ರಶಸ್ತಿ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳು ಲಭಿಸಿವೆ . 

ಬಿ.ಎಸ್. ಸ್ವಾಮಿ

(08 Sep 1942)