About the Author

ಕನ್ನಡದ ಖ್ಯಾತ ವಿಮರ್ಶಕ ಹಾಗೂ ಚಿಂತಕರಾದ ಡಾ.ಡಿ.ಆರ್.ನಾಗರಾಜು ಅವರು ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ದೊಡ್ಡಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದ ಡಿ.ಆರ್ ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅಲ್ಲಿಯೇ ಕನ್ನಡ ಅಧ್ಯಾಪಕರಾದರು. ಪ್ರವಾಚಕರಾದರು, ಜೊತೆಗೆ ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು. ಕನ್ನಡದ ವಿಮರ್ಶೆಗೆ ಸಾಂಸ್ಕೃತಿಕ ಆಯಾಮವನ್ನು ಒದಗಿಸಿದ ನಾಗರಾಜ್ ಅಮೆರಿಕದ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಹಾಗೂ ಅಕ್ಷರ ಪ್ರಕಾಶನದ ಅಕ್ಷರ ಚಿಂತನ ಮಾಲೆಯ ಸಂಪಾದಕರಾಗಿಯೂ ದುಡಿದರು.

ಅಮೃತ ಮತ್ತು ಗರುಡ ಇವರ ಮೊದಲ ವಿಮರ್ಶಾಕೃತಿ (1983). ಇದರಲ್ಲಿ ಕುವೆಂಪು, ಶಿವರಾಮ ಕಾರಂತ, ಮಾಸ್ತಿ ಮೊದಲಾದ ಲೇಖಕರ ಕುರಿತಾದ ಮತ್ತು ರಂಗಭೂಮಿ, ಕಾವ್ಯ, ಪ್ರಾಯೋಗಿಕ ವಿಮರ್ಶೆಗೆ ಸಂಬಂಧಿಸಿದ 16 ಪ್ರೌಢ ಲೇಖನಗಳಿವೆ. ಆಧುನಿಕ ಕನ್ನಡ ಕಾವ್ಯದ ನಾಲ್ಕು ಪ್ರಮುಖ ವಸ್ತುಗಳಾದ ಭೂಮಿ, ಕಾಲ, ಕಾಮ ಮತ್ತು ಸಮಾಜಗಳನ್ನು ಮುಂದಿಟ್ಟುಕೊಂಡು ಕನ್ನಡದ ಮುಖ್ಯ ಕವಿಗಳ ಕಾವ್ಯದ ಅಧ್ಯಯನವನ್ನೊಳಗೊಂಡಿರುವ ಕೃತಿ ‘ಶಕ್ತಿ ಶಾರದೆಯ ಮೇಳ’ (1987). ಇದು ಇವರ ಪಿಎಚ್.ಡಿ. ಮಹಾಪ್ರಬಂಧದ ಪರಿಷ್ಕೃತ ರೂಪ. ಜ್ಞಾನದ ಪೂರ್ವನಿಶ್ಚಿತ ಕಲ್ಪನೆಗಳನ್ನು ಮೀರಿನಿಲ್ಲುವ ರಾಜಕೀಯ, ಸಾಹಿತ್ಯಕ, ಸಾಮಾಜಿಕ ವಾಚಿಕೆಗಳನ್ನು ಹೆಣೆದುಕೊಂಡು ಸಾಮಾಜಿಕ ಕಥನವಾಗಿರುವ ಕೃತಿ ‘ಸಾಹಿತ್ಯ ಕಥನ’ (1996). ಅಲ್ಲಮ್ಮನನ್ನು ನಮ್ಮ ಕಾಲದ ದೃಷ್ಟಿಯಿಂದಲೂ ಸಾಹಿತ್ಯದ ದೃಷ್ಟಿಯಿಂದಲೂ ನೋಡುವ ಆಚಾರ್ಯ ಕೃತಿ ‘ಅಲ್ಲಮ್ಮ ಮತ್ತು ಶೈವ ಪ್ರತಿಭೆ’ (1999). ವಿಮರ್ಶೆಯ ಹೊಸ ನೆಲೆಗಳನ್ನು ತೆರೆದಿಟ್ಟ ಕೃತಿ ‘ಸಂಸ್ಕೃತಿ ಕಥನ’ (2001).

ಪಾಶ್ಚಾತ್ಯ ಸಾಹಿತ್ಯ ಮಾರ್ಗದರ್ಶಿ ಸಂಪುಟ 1  ಗ್ರೀಕ್ ಸಾಹಿತ್ಯ (1981), ವಸಂತ ಸ್ಮೃತಿ (ಪರ್ಶಿಯನ್ ಸೂಫಿ ಕವಿ ರೂಮಿಯ ಕಾವ್ಯಾನುವಾದ-1992), ಉರ್ದು ಸಾಹಿತ್ಯ ಸಂಕಲನ 1990, ದಿ ಫೇಮಿಂಗ್ ಪ್ಲೀಟ್ (1993-ದಲಿತ ಚಳವಳಿ ಕುರಿತ ಪುಸ್ತಕ)  ಇವು ಇತರ ಪ್ರಕಟಿತ ಕೃತಿಗಳು. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಹಲವು ವಿಚಾರ ಸಂಕಿರಣಗಳಲ್ಲಿ ಇವರು ತಮ್ಮ ಪ್ರೌಢ ಚಿಂತನೆಗಳನ್ನು ಪ್ರಕಟಿಸಿದ್ದಾರೆ. ನಿರ್ಲಕ್ಷಿತ ಸಾಂಸ್ಕೃತಿಕ ವಾಚಿಕೆಗಳ ಪುನರ್ ವ್ಯಾಖ್ಯಾನದ ಕಾಳಜಿ ಹೊಂದಿದ್ದ ಇವರು ಸಮಸ್ತ ಜ್ಞಾನವೂ ಒಂದು ಬಗೆಯ ಕಥನವೇ ಮತ್ತು ಎಲ್ಲಾ ಜ್ಞಾನಗಳನ್ನು ಸಾಹಿತ್ಯ ಮೀಮಾಂಸೆಯ ಮೂಲಕ ಪ್ರವೇಶಿಸಲು ಸಾಧ್ಯ ಎಂಬ ನಿಲುವುಳ್ಳವರಾಗಿದ್ದರು. ವಿಮರ್ಶೆಯ ಸಂದರ್ಭದಲ್ಲಿ ವಸ್ತುನಿಷ್ಟ ದೃಷ್ಟಿಕೋನ ಮತ್ತು ತಟಸ್ಥ ಮನೋಭಾವ ಹೊಂದಿದ್ದ ಇವರು ವ್ಯಕ್ತಿ ವಿಶಿಷ್ಟ ಲೋಕಜ್ಞಾನ, ಮಾರ್ಕ್ಸ್ ವಾದೀ ಚಿಂತನೆ, ಫ್ರಾಯ್ಡ್ ಚಿಂತನೆ ಮತ್ತು ಭಾರತೀಯ ಚಿಂತನೆಗಳಿಂದ ಪಡೆದ ಜ್ಞಾನವನ್ನು ತಮ್ಮ ಬರೆವಣಿಗೆಯಲ್ಲಿ ಧಾರೆ ಎರೆದಿದ್ದಾರೆ.

ಕನ್ನಡದ ಮೂಲಕವೇ ಸಮಸ್ತ ವಿಶ್ವವನ್ನು ಕಂಡುಕೊಳ್ಳುವ ಮಹತ್ವಾಕಾಂಕ್ಷೆಯ ಅಕ್ಷರ ಚಿಂತನ ಮಾಲೆಯ ಸಂಪಾದಕರಾಗಿ ಸತ್ಯದ ನವದರ್ಶನ, ಆಶೀಶ್‍ನಂದಿ ವಿಚಾರಗಳು, ವಾಕ್ಯಪದೀಯ, ದಾರಾಶಿಖೊ, ದಾವ್‍ದಜಂಗ್, ಅಭಿನವಗುಪ್ತ, ಭಾರತೀಯ ಸ್ತ್ರೀವಾದ, ಆನಂದಕುಮಾರಸ್ವಾಮಿ, ಪ್ರತಿಭೆಯ ಒಂದು ಪ್ರವಾಹ ಮೊದಲಾದ ಅನೇಕ ಅಮೂಲ್ಯ ಪುಸ್ತಿಕೆಗಳನ್ನು ಹೊರತಂದಿದ್ದಾರೆ.

ಇವರಿಗೆ ಅನೇಕ ಗೌರವ, ಪ್ರಶಸ್ತಿಗಳು ದೊರಕಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಪ್ರಶಸ್ತಿಗಳು ಸಂದಿವೆ. 

ಡಿ. ಆರ್. ನಾಗರಾಜ್

(20 Feb 1954-12 Aug 1998)