About the Author

ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ  ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ವರ್ಣಾನಾತ್ಮಕ ಸೂಚಿ, ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ ಮೊದಲಾದ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 

ಮಹಾರಾಷ್ಟ್ರ ಸರಕಾರದ ಶಿಕ್ಷಣ ಇಲಾಖೆ, ರಾಜ್ಯ ಪಠ್ಯಪುಸ್ತಕ ಮಂಡಳಿ, ಮಹಾರಾಷ್ಟ್ರ ಸರಕಾರದ ಗುಪ್ತಚರ ಇಲಾಖೆ ಮೊದಲಾದ ಉನ್ನತ ಸಂಸ್ಥೆಗಳಲ್ಲಿ ವಿಷಯ ತಜ್ಞರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರದುರ್ಗದ ಮುರುಘಾಮಠ ಅವರಿಗೆ ಶಿಕ್ಷಣ ವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಿದೆ. ಉಪಾಧ್ಯ ಅವರ ಕೃತಿಗೆ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ 'ಶಾಂತಿಲಾಲ್ ಪ್ರಶಸ್ತಿ ದೊರಕಿದೆ. ಇತ್ತೀಚೆಗೆ ಅವರ 'ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ ಕೃತಿಗೆ ಗದ್ಯ ವಿಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 'ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನ ಲಭಿಸಿದೆ. ಡಾ. ಉಪಾಧ್ಯ ಅವರ ಕನ್ನಡ ಕೈಂಕರ್ಯವನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ನಡೆದ 77ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಿದೆ. ಬಿಲ್ಲವರ ಅಸೋಸಿಯೇಷನ್ ಕೊಡ ಮಾಡುವ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಯೂ ಅವರಿಗೆ ಸಂದಿದೆ. ಕೆಲಕಾಲ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಪುಸ್ತಕ ಅವಲೋಕನದ ವಿಮರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹೊರನಾಡಾದ ಮುಂಬೈಯಲ್ಲಿ ಅಭಿಜಿತ್ ಪ್ರಕಾಶನವನ್ನು ಆರಂಭಿಸಿ, ಬೇರೆ ಬೇರೆ ಲೇಖಕರ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಈವರೆಗೆ ಡಾ. ಉಪಾಧ್ಯ ಅವರ ಅರವತ್ತು ಕೃತಿಗಳು ಬೆಳಕು ಕಂಡಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 70 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸದ್ಯ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿ.ಎನ್. ಉಪಾಧ್ಯ

(07 Feb 1967)