About the Author

ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್‌ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ಅವರು ನಂತರ ಮೈಸೂರು ಮಾನಸ ಗಂಗೋತ್ರಿಯ ಅಂಚೆ ತೆರಪಿನ ಶಿಕ್ಷಣದ ನಿರ್ದೇಶಕರಾಗಿದ್ದರು. ಶಿವಮೊಗ್ಗ ಬಿ.ಆರ್‌. ಪ್ರಾಜೆಕ್ಟ್‌ನಲ್ಲಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅವರು ನಂತರ ಗಂಗೋತ್ರಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.

ಪ್ರಾಚೀನ ಕನ್ನಡ ಕಾವ್ಯ- ಸಾಹಿತ್ಯದಲ್ಲಿ ವಿಶೇಷ ಪರಿಣತಿ ಪಡೆದಿದ್ದ ತಿಪ್ಪೇರುದ್ರಸ್ವಾಮಿ ಅವರು ಅಲ್ಲಮಪ್ರಭು (ಪರಿಪೂರ್ಣದೆಡೆಗೆ), ನಿಜಗುಣ ಶಿವಯೋಗಿ (ಜ್ಯೋತಿ ಬೆಳಗಿತು), ಸಿದ್ಧರಾಮ (ನೆರಳಿನಾಚೆಯ ಬದುಕು), ಅಕ್ಕಮಹಾದೇವಿ (ಕದಳಿಯ ಕರ್ಪುರ), ಷಣ್ಮುಖ ಶಿವಯೋಗಿ (ಜಡದಲ್ಲಿ ಜಂಗಮ) ಗಳನ್ನು ಕುರಿತು ಕಾದಂಬರಿ ರಚಿಸಿದ್ದಾರೆ.

ತೌಲನಿಕ ಕಾವ್ಯ ಮೀಮಾಂಸೆ, ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ,  ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ ಕೃತಿಗಳು ತಿಪ್ಪೇರುದ್ರಸ್ವಾಮಿ ಅವರ ವೈಚಾರಿಕ ವಿಮರ್ಶಾ ಗ್ರಂಥಗಳು. ಇವರ ’ಕರ್ನಾಟಕ ಸಂಸ್ಕೃತಿ ಸಮೀಕ್ಷೆ’  ಕೃತಿಗೆ 19169 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರತಿತ್ತು. ಅವರಿಗೆ ’ಶಿವಚಿಂತನೆ’ ಎಂಬ ಅಭಿನಂದನಾ ಗ್ರಂಥ ಸಲ್ಲಿಸಲಾಗಿತ್ತು.

ತಿಪ್ಪೇರುದ್ರಸ್ವಾಮಿಯವರು 1994ರ ಅಕ್ಟೋಬರ 28ರಂದು ಅಸು ನೀಗಿದರು.

ಎಚ್‌. ತಿಪ್ಪೇರುದ್ರಸ್ವಾಮಿ

(03 Feb 1928-28 Oct 1994)

Awards