About the Author

ಸಂಸ್ಕೃತ ವಿದ್ವಾಂಸ ಹೆಚ್‌.ವಿ. ನಾಗರಾಜರಾವ್‌  ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ (10-9-1942) ಹುಟ್ಟಿದರು. ಎರಡೂವರೆ ವರ್ಷದ ಬಾಲಕರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಜ್ಜನ ಮನೆಯಲ್ಲಿ ಬೆಳೆದರು. ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯಲ್ಲಿ ದುಡಿದರು. ವಿದ್ಯಾಗುರು ವಿದ್ವಾನ್‌ಎನ್‌.ವಿ. ಅನಂತರಾಮಯ್ಯನವರು ಇವರಿಗೆ ನೆರವಾಗುತ್ತಾರೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾಗಿ ಮೈಸೂರಿಗೆ ಬಂದು ಸಂಸ್ಕೃತ ಮಹಾ ಪಾಠಶಾಲೆ ಸೇರಿ, ಅಲಂಕಾರ ಶಾಸ್ತ್ರಗಳನ್ನು ಕಲಿತರು.  ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು. 

ಇವರ ವ್ಯಾಕರಣ ಗುರು ವಿದ್ವಾನ್‌ ಸೋ. ರಾಮಸ್ವಾಮಿ ಅಯ್ಯಂಗಾರ್‌ ಅವರು ತಮ್ಮಲ್ಲಿ ಕಲಿಯಲು ಬಂದ ಎಡ್ವಿನ್‌ ಎಂ. ಜೆರೋ ಎಂಬ ವಾಷಿಂಗ್‌ಟನ್ ನಿವಾಸಿ, ವ್ಯಾಕರಣಾಭ್ಯಾಸದಲ್ಲಿ ನೆರವಾಗಲು ಸೂಚಿಸಿದರು. ನಾಗರಾಜರಾಯರು ಅವರಿಗೂ ವ್ಯಾಕರಣ ಶಾಸ್ತ್ರ ಕುರಿತು ಬೋಧಿಸಿದರು. ಇವರ ಪಾಂಡಿತ್ಯ ಮೆಚ್ಚಿದ ಜೆರೋ ಅವರು ಅಮೆರಿಕೆಗೆ ಕರೆದೊಯ್ದು. ಜೆರೂಸಲೇಂ, ಇಂಡೋನೆಷಿಯಾಕ್ಕೂ ಭೇಟಿ ನೀಡಿ, ಸಂಸ್ಕೃತ ಭಾಷಾ-ಸಾಹಿತ್ಯ ಅಭ್ಯಾಸಿಗಳಿಗೆ ಬೋಧಿಸಿದರು. 

ಕೃತಿಗಳು: ಹಸ್ತಪ್ರತಿಗಳಲ್ಲಿದ್ದ ಹಲವಾರು ಸಂಸ್ಕೃತಗ್ರಂಥಗಳನ್ನು ಸಂಪಾದಿಸಿದರು. ಹೃದಯಾಮೃತ, ಕಾಮವಿಲಾಸಭಾಣ, ಶಿವನಾಮಕಲ್ಪಲತಾಲವಾಲ, ನ್ಯಾಯಶತಕ, ಜಗನ್ನಾಥವಿಜಯ ಇತ್ಯಾದಿ. ಗ್ರಂಥಗಳ ಸಂಪಾದನೆ,  ಅನುವಾದ, ಸಂಶೋಧನ ಪ್ರಕಲ್ಪಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ ದುಡಿದಿದ್ದಾರೆ. ಪಠ್ಯ ಪುಸ್ತಕಗಳ ರಚನೆಯಲ್ಲಿಯೂ ಶ್ರಮಿಸಿದ್ದಾರೆ. 

ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಜೆ. ಎಸ್‌. ಎಸ್‌. ಸಂಸ್ಕೃತ ಸಂಶೋಧನ ಕೇಂದ್ರ, ಪೂರ್ಣಪ್ರಜ್ಞ ಸಂಶೋಧನ ಮಂದಿರ ಹೀಗೆ ಅನೇಕ ಸಂಸ್ಥೆಗಳ ಪ್ರಕಲ್ಪಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಸ್ಕೃತದ ಏಕೈಕ ದಿನಪತ್ರಿಕೆ ಸುಧರ್ಮಾಕ್ಕೆಅವರು ಸಂಪಾದಕ ಮಂಡಲಿ ಸದಸ್ಯರಾಗಿದ್ದರು. ಅನ್ಯಾಪದೇಶ ಶತಕ, ಆನಂದ ಸಾಗರಸ್ತವ, ಸುಭಾಷಿತ ಕೌಸ್ತುಭ, ಭಲ್ಲಟ ಶತಕ, ಲಕ್ಷ್ಮೀಲಹರಿ ಇತ್ಯಾದಿ ಕೃತಿಗಳಿಗೆ ವ್ಯಾಖ್ಯಾನ ಬರೆದಿದ್ದಾರೆ. ಅಸ್ಮಾಕಂಗೃಹಸ್ಯ ದೀಪಃ, ಚಾರುವಾಸಂತೀಯಮ್‌, ಸಾರ್ಥಃ ಮುಂತಾದುವು) ಕನ್ನಡದಿಂದ ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ.  ಪ್ರೇಮಚಂದ್ರರ ಹಿಂದಿಯ ಸಣ್ಣ ಕತೆಗಳನ್ನು ವಿಪಂಚಿಕಾ ಹೆಸರಿನಲ್ಲಿ ಸಂಸ್ಕೃತೀಕರಿಸಿದ್ದಾರೆ. ಶಿವಶರಣರ ಆಯ್ದ ಐದು ಸಾವಿರ ವಚನಗಳ ಸಂಸ್ಕೃತಾನುವಾದಕ್ಕೆ ಸಂಪಾದಕರಾಗಿದ್ದರು. 

ವರದರಾಜಸ್ತವ, ನೀತಿದ್ವಿಷಷ್ಟಿಕಾ, ಕಥಾಸರಿತ್ಸಾಗರ (ಮೂರು ಲಂಬಕಗಳು), ಬಸವಾನಂದಲಹರೀ, ಅಲಂಕಾರಸರ್ವಸ್ವ, ವ್ಯಕ್ತಿವಿವೇಕ  ಹಾಗೂ ಸೂಕ್ತಿ ದ್ವಿಶತೀ, ನಾಗರಾಜ ಶತಕಮ್‌, ದುರ್ಜನ ಶತಕಮ್‌, ಸಜ್ಜನ ಶತಕಮ್‌, ಕಲಿ ವಿಮರ್ಶನ ಶತಕಮ್‌, ರಾಮಚಂದ್ರ ಶತಕಮ್‌ -ಇವು ಪದ್ಯ ರೂಪದಲ್ಲಿ ಭಾ಼ಷಾಂತರಿಸಿದ ಕೃತಿಗಳು. ಶ್ರೀ ತತ್ವ ನಿಧಿ ಮತ್ತು ರಾಮಾಯಣದ ಮಹೇಶ್ವರ ತೀರ್ಥೀಯ ವ್ಯಾಖ್ಯಾನಗಳಂಥ ಸಂಸ್ಕೃತ ಗ್ರಂಥಗಳನ್ನು ಮತ್ತು ಭಲ್ಲಟ ಶತಕ, ಅನ್ಯಾಪದೇಶ ಶತಕ ಮತ್ತು ಆನಂದ ಸಾಗರಸ್ತವಗಳನ್ನೂ  ಇಂಗ್ಲಿಷಿನಲ್ಲಿ ಅನುವಾದಿಸಿದ್ದಾರೆ.  ಭಾರತ: ಧರ್ಮಗಳ ಮೈತ್ರಿಯ ನಾಡು, ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ, ಭಾರತದ ಮೂಲಭೂತ ಏಕತೆ ಇತ್ಯಾದಿ ಕೃತಿಗಳು ಗಮನಾರ್ಹ. ಭಾರತೀಯ ವಿದ್ಯಾಭವನ ಪ್ರಕಟಿಸಿರುವ 25 ಸಂಪುಟಗಳ ಭಾರತದ ಇತಿಹಾಸ ಕುರಿತ ಗ್ರಂಥಮಾಲೆಗೆ ಅಧ್ಯಾಯಗಳನ್ನು ಕನ್ನಡಿಸಿದ್ದಾರೆ. ಮಾಲವಿಕಾ ಮತ್ತು ಋಣ ವಿಮುಕ್ತಿಃ ಕಾದಂಬರಿಗಳನ್ನೂ ದಾಂಪತ್ಯ ಕಲಹ‌ಮ್‌, ಸಮುದ್ಯತಾ, ರೂಪಕ ಚತುಷ್ಟಯೀ (ಸಂಕಲನ) ಮತ್ತು ವಿದುಲಾಪುತ್ರೀಯಮ್‌ ರೂಪಕಗಳನ್ನೂ ಸಂಸ್ಕೃತದಲ್ಲಿ ಪ್ರಕಟಿಸಿದ್ದಾರೆ. ಶಾರದಾ ದರ್ಶನಮ್‌ ಎಂಬುದು ಇವರ ಪ್ರವಾಸ ಕಥನ.

ಪ್ರಶಸ್ತಿ-ಗೌರವಗಳು: ಡಾ. ಎಸ್‌. ಎಲ್‌. ಭೈರಪ್ಪನವರ ಸಾರ್ಥ ಕಾದಂಬರಿಯ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯಅಕಾಡೆಮಿಯ ಪ್ರಶಸ್ತಿ , ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಷ್ಟ್ರಪತಿ ಪುರಸ್ಕಾರ, ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಸಂದರ್ಶನ ಪ್ರಾಧ್ಯಾಪಕತ್ವದ ಗೌರವ, ವ್ಯಾಸ ಮಹರ್ಷಿ ಪ್ರಶಸ್ತಿ, ಕಾವ್ಯಶಾಸ್ತ್ರ ವಿಚಕ್ಷಣ ಪುರಸ್ಕಾರ, ಶಾಸ್ತ್ರ ವಿದ್ಯಾನಿಧಿ ಪ್ರಶಸ್ತಿ ಲಭಿಸಿವೆ. 

ಹೆಚ್.ವಿ. ನಾಗರಾಜರಾವ್

(10 Sep 1942)